ಬೆಳಗಾವಿ : ಬೆಳಗಾವಿ ಲೋಕಸಭಾ ಟಿಕೆಟ್ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ ಸಿಗುವುದು ಬಹುತೇಕ ಖಚಿತವಾಗಿದೆ.

ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ ನಡ್ಡಾ ಹಸಿರು ನಿಶಾನೆ ತೋರಿದ್ದಾರೆ. ಜಗದೀಶ ಶೆಟ್ಟ‌ರ್ ಆಸೆಯಂತೆ ಧಾರವಾಡ ಮತ್ತು ಹಾವೇರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಸಿಗದಿದ್ದರೂ ಅನಿವಾರ್ಯವಾಗಿ ಬೆಳಗಾವಿ ಟಿಕೆಟ್ ಒಪ್ಪಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಅಲ್ಲಿ ಸ್ಥಳೀಯ ನಾಯಕರ ಆಕ್ಷೇಪ, ಶೆಟ್ಟರ್ ಗೋ ಬ್ಯಾಕ್ ಹೇಳಿಕೆಗಳಿಂದಾಗಿ ಅವರಿಗೆ ಮತ್ತೆ ಆತಂಕ ಎದುರಾಗಿತ್ತು. ಬಿಜೆಪಿ 3ನೇ ಪಟ್ಟಿ ಇನ್ನೂ 2-3 ದಿನಗಳಲ್ಲಿ ಬಿಡುಗಡೆ ಆಗಬಹುದು.

ಬೆಳಗಾವಿ ಲೋಕಸಭಾ ಟಿಕೆಟ್ ಪಡೆಯಲು ಎರಡು ದಿನಗಳಿಂದ ದೆಹಲಿಯಲ್ಲೇ ಶೆಟ್ಟರ್ ಬೀಡು ಬಿಟ್ಟಿದ್ದರು. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಟಿಕೆಟ್ ಖಾತ್ರಿಪಡಿಸಿಕೊಂಡಿದ್ದರು. ಕೇಂದ್ರ ಗ್ರಹ ಸಚಿವ ಅಮಿತ್ ಷಾ ಅವರನ್ನು ಸಹ ಭೇಟಿ ಮಾಡಿ ಟಿಕೆಟ್ ಅಂತಿಮಗೊಂಡ ನಂತರ ಹುಬ್ಬಳ್ಳಿಗೆ ಮರಳಿದ್ದರು. ಒಟ್ಟಾರೆ ಬೆಳಗಾವಿ ಬಿಜೆಪಿ ಮುಖಂಡರ ಆಕ್ಷೇಪದ ನಡುವೆಯೂ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಬಹುತೇಕ ಯಶಸ್ವಿಯಾಗಿದ್ದು ಇದೀಗ ಬಿಡುಗಡೆಗೊಳ್ಳಲಿರುವ ಬಿಜೆಪಿ ಪಟ್ಟಿಯಲ್ಲಿ ಶೆಟ್ಟರ್ ಹೆಸರು ಬೆಳಗಾವಿಯಿಂದ ಅಧಿಕೃತವಾಗಿ ಘೋಷಣೆಯಾಗುವುದು ಖಚಿತ ಎಂಬ ಮಾಹಿತಿ ಲಭಿಸಿದೆ.