ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಗೆ ಡಬಲ್ ಶಾಕ್ ಎದುರಾಗಿದೆ.
ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸುವ ಪ್ರಯತ್ನ ಬಹುತೇಕ ವಿಫಲವಾಗಿದ್ದು, ಇಬ್ಬರು ಬಿಜೆಪಿ ಶಾಸಕರು ಮತದಾನದಲ್ಲಿ ಕೈ ಕೊಟ್ಟಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಮತದಾನದ ಪ್ರಕ್ರಿಯೆ ಅಂತ್ಯವಾಗಿದ್ದು, ಇನ್ನು ಕೆಲವೇ ಕ್ಷಣದಲ್ಲಿ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.
ಅವಧಿ ಮುಗಿದರೂ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರು ಮತದಾನಕ್ಕೆ ಹಾಜರಾಗಿಲ್ಲ. ಒಂದೇ ದಿನ ಇಬ್ಬರು ಶಾಸಕರು ಬಿಜೆಪಿಗೆ ಕೈ ಕೊಡುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಎದುರಾಗಿದೆ.
ಬೆಳಗ್ಗೆ ಮತದಾನಕ್ಕೆ ಬಂದಿದ್ದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರು ಆತ್ಮಸಾಕ್ಷಿಯ ಮತ ಹಾಕುತ್ತೇನೆ ಎಂದು ಹೇಳಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಬಿಜೆಪಿ ವಿಪ್ ಜಾರಿ ಮಾಡಿದ್ದರೂ ಸ್ವೀಕರಿಸಿರಲಿಲ್ಲ. ಬೆಳಗ್ಗೆ ಬಿಜೆಪಿ ನಾಯಕರು ಸಂಪರ್ಕಿಸಿದಾಗ ಪಕ್ಷದ ಪರವಾಗಿ ಇರುತ್ತೇನೆ ಎಂದಿದ್ದರು. ಆದರೆ ಮತದಾನಕ್ಕೆ ಗೈರಾಗಿರುವ ಶಿವರಾಮ್ ಹೆಬ್ಬಾರ್ ಅವರು ಕೊನೆಗೂ ಬಿಜೆಪಿಗೆ ಕೈ ಕೊಟ್ಟಿದ್ದಾರೆ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಇಬ್ಬರ ಈ ನಿರ್ಧಾರದಿಂದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿನ್ನಡೆ ಆಗಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಒಟ್ಟು 66 ಶಾಸಕರ ಪೈಕಿ ಬಿಜೆಪಿ ಪರ 64 ಮತಗಳು ಮಾತ್ರ ಚಲಾವಣೆ ಆಗಿದೆ. ಈ ಮೂಲಕ ರಾಷ್ಟ್ರೀಯ ಪಕ್ಷ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನೆಡೆಯಾಗಿದೆ.