ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚಿಗೆ ಸೇವೆಯಿಂದ ನಿವೃತ್ತಗೊಂಡಿರುವ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಮಂಜುನಾಥ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವ ಬಗ್ಗೆಯೂ ಮಹತ್ವದ ಚರ್ಚೆ ನಡೆಸಲಾಗಿದೆ.

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಮೈತ್ರಿ ಪಕ್ಷಗಳ ಸೀಟು ಹಂಚಿಕೆಗೆ ಬಗ್ಗೆ ಚರ್ಚೆ ನಡೆದಿದ್ದು, ಸದ್ಯಕ್ಕೆ ಮೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

ಮೂಲಗಳ ಪ್ರಕಾರ ಬಿಜೆಪಿ ಹೈಕಮಾಂಡ್‌ ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಸದ್ಯ ಮೂರು ಕ್ಷೇತ್ರ ಬಿಟ್ಟು ಕೊಡಲು ಮುಂದಾಗಿರುವ ಬಿಜೆಪಿ, ಉಳಿದಂತೆ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಅಭ್ಯರ್ಥಿಗಳನ್ನು ಆಯ್ಕೆಯ ಸಂದರ್ಭದಲ್ಲಿ ತೀರ್ಮಾನಿಸುವುದಾಗಿ ಹೇಳಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ನಿವಾಸದಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಸಭೆ ಮಾಡಿದ್ದರು. ಈ ಸಭೆಯಲ್ಲಿ ಸೀಟು ಹಂಚಿಕೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಫೆಬ್ರವರಿ 4ರಂದು ಮಂಡ್ಯ, ಹಾಸನ, ಕೋಲಾರದ ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡಿದೆ.
ಇದೀಗ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರುತ್ತಲೇ
ಜೆಡಿಎಸ್‌ ಮಂಡ್ಯ, ಹಾಸನ, ಕೋಲಾರದಲ್ಲಿ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಲಿದೆ.