ಬೆಂಗಳೂರು :
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್ ತಮಗೆ ನೀಡುವಂತೆ ಒತ್ತಾಯಿಸಿ ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದಾರೆ.

ವಿಜಯೇಂದ್ರ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ ರಮೇಶ ಕತ್ತಿ ಅವರು, ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಬದಲಾಯಿಸಿ ತಮಗೆ ಟಿಕೆಟ್ ನೀಡುವಂತೆ ಅವರು ಒತ್ತಾಯಿಸಿದರು.

ನಾನು ಚಿಕ್ಕೋಡಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ಮೊದಲು ಒಂದು ಅವಧಿಗೆ ನಾನು ಚಿಕ್ಕೋಡಿ ಸಂಸದನಾಗಿದ್ದೆ. ನಂತರ ಸೋತ ಬಳಿಕ ಟಿಕೆಟ್ ನೀಡಲಿಲ್ಲ. ರಾಜ್ಯಸಭಾ ಮತ್ತು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವುದಾಗಿ ಪಕ್ಷ ಹೇಳಿದ್ದರೂ ಸಹಾ ಆ ಭರವಸೆ ಈಡೇರಿಸಲಿಲ್ಲ. ಮತ್ತೆ ಚಿಕ್ಕೋಡಿ ಮತಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ. ಗೆಲ್ಲುವ ಮಾನದಂಡದ ಆಧಾರದ ಮೇಲೆ ಈ ಸಲ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡಿದರೆ ಸೂಕ್ತ. ಬೇಕಾದರೆ ಈ ಬಗ್ಗೆ ಸಮೀಕ್ಷೆ ಮಾಡಲಿ ಎಂದು ಅವರು ಹೇಳಿದರು.