ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಕೇಳಿ ಬಂದಾಗಲೆಲ್ಲಾ ಅಖಂಡ ಕರ್ನಾಟಕದ ಮಾತುಗಳು ಜೋರಾಗಿ ಕೇಳುತ್ತವೆ .
ಸರಿ, ಅಖಂಡ ಕರ್ನಾಟಕ ಎಂಬುದು ನನ್ನ ಖಚಿತ ನಿಲುವು. ಉಸಿರಿರೋವರೆಗು ಅಖಂಡ ಕರ್ನಾಟಕದ ಪರವಾಗಿಯೇ ಇರುವೆ. ಆದರೆ, ಈ ಬಾಳ್ವಿಕೆಯಲ್ಲಿ ನ್ಯಾಯವಿದೆಯಾ? ಯಾಕೆ ಅವರು ಪ್ರತ್ಯೇಕ ಉತ್ತರ ಕರ್ನಾಟಕವನ್ನು ಕೇಳುತ್ತಿದ್ದಾರೆ? ಅವರ ನೋವಲ್ಲಿ ನಿಜವಾಗಿಯೂ ಕಾಳಜಿ ಇದೆಯಾ? ಅವರ ಕಷ್ಟಗಳೇನು? ಅದನ್ನು ಕೇಳಿಸಿಕೊಳ್ಳದಂತೆ ಈ ಭಾವುಕ ಮಾತುಗಳು ತಡೆದಿದ್ದವಾ? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕೂತರೆ, ನಿಜಕ್ಕೂ ಅವರ ಪಾಡು ದುಸ್ತರ. ಅಖಂಡ ಕರ್ನಾಟಕದ ಕಲ್ಪನೆಯ ಜೊತೆ ಜೊತೆಗೆ ಅವರ ಕಷ್ಟಗಳನ್ನು ಕೇಳುವ ಜರೂರತ್ತೂ ಇದೆ ಎನ್ನುವುದು ವಾಸ್ತವ. ಉದ್ಯೋಗ, ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅವರನ್ನು ನಾವು ಮಾತನಾಡಿಸಬೇಕಿದೆ.

ವೀರಲೋಕ ಶುರುವಾದ ಹೊತ್ತಿನಲ್ಲಿ ಹಿಂದೊಮ್ಮೆ ನಾನು ಏಳೆಂಟು ಸಾಹಿತಿಗಳನ್ನು ಕರೆದುಕೊಂಡು ಪುಸ್ತಕಗಳ ಮರು ಬಿಡುಗಡೆಗಾಗಿ ದೂರದ ಬೀದರಿಗೆ ಹೋಗಿದ್ದೆ. ನನ್ನ ಈ ನಡೆಯನ್ನು ಅಲ್ಲಿನ ಸಾಂಸ್ಕೃತಿಕ ಬಳಗ ಅಚ್ಚರಿಯಿಂದಲೇ ಎದುರುಗೊಂಡಿತ್ತು. ‘ನನ್ನ ಜೊತೆ ಬಂದಿದ್ದ ಸಾಹಿತಿಗಳನ್ನು ನೋಡಿ “ನಿಜಕ್ಕೂ ನಂಬಲು ಆಗುತ್ತಿಲ್ಲ. ನಿಮ್ಮನ್ನೆಲ್ಲ ನಾವು ನೋಡ್ತೀವಿ ಅಂದುಕೊಂಡಿರಲಿಲ್ಲ’ ಎಂದು ಅಚ್ಚರಿ ವ್ಯಕ್ತ ಪಡಿಸಿದ್ದರು. ಈ ಮಾತಿನ ಹಿಂದಿನ ಅರ್ಥವನ್ನು ನಿಮಗೆ ಬಿಟ್ಟು ಬಿಡುತ್ತೇನೆ.

ಬೆಂಗಳೂರು ಮತ್ತು ಸುತ್ತಲಿನ ಜಿಲ್ಲೆಯವರು ರಾಜಧಾನಿಯಲ್ಲಿನ ಕೆಲಸಗಳಿಗಾಗಿ ಹಾಗೆ ಬಂದು ಹೀಗೆ ಹೋಗಿ ಬಿಡುತ್ತಾರೆ. ಆದರೆ, ಉತ್ತರ ಕರ್ನಾಟಕದವರು ಹಾಗೆ ಮಾಡುವುದಕ್ಕೆ ಸಾಧ್ಯವಾ? ದೂರದ ಬೆಟ್ಟ ನುಣ್ಣಗೆ ಎನ್ನುವುದು ಅವರಿಗೆ ಗೊತ್ತಿದೆ. ಹಾಗಾಗಿಯೇ ಕನಿಷ್ಠ ಎರಡು ದಿನವಾದರೂ ಅದಕ್ಕೆ ಎತ್ತಿಡುತ್ತಾರೆ. ಕೆಲಸವಾಗದೇ ಇದ್ದರೆ ಇನ್ನಷ್ಟು ದಿನಗಳನ್ನು ಅದಕ್ಕೆ ಸೇರಿಸ್ತಾರೆ. ಪ್ರಯಾಣ ದುಬಾರಿ, ಖರ್ಚು ಇನ್ನೂ ದುಬಾರಿ.

ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದ ಅನೇಕರನ್ನು ನಾನು ಕಂಡಿದ್ದೇನೆ. ಅಗ್ಗ ಎನ್ನುವ ಕಾರಣಕ್ಕಾಗಿ ತುಂಬಿದ ರೈಲಿನಲ್ಲಿ ಪ್ರಯಾಣ ಬೆಳೆಸ್ತಾರೆ. ತಮ್ಮೊಂದಿಗೆ ಬುತ್ತಿಗಂಟು ತರುತ್ತಾರೆ. ಬಂದ ಕೆಲಸ ನಿಗದಿತ ವೇಳೆ ಆಗದೇ ಇದ್ದರೆ, ಕಡಿಮೆ ದರದಲ್ಲಿನ ಲಾಡ್ಜ್ ಹುಡುಕುತ್ತಾರೆ. ಇನ್ನೂ ಕೆಲವರು ರೈಲ್ವೆ ನಿಲ್ದಾಣದಲ್ಲಿ ಮಲಗಿ, ಅಲ್ಲಿಯೇ ಮುಖ ತೊಳೆದುಕೊಂಡು ಮತ್ತೆ ತಮ್ಮ ಕೆಲಸಕ್ಕೆ ಹೊರಟವರೂ ಇದ್ದಾರೆ.

ಇಲಾಖೆಗಳಲ್ಲಿನ ಕೆಲಸಕ್ಕಾಗಿ ಬರುವವರದ್ದು ಒಂದು ಬಗೆಯ ನೋವಾದರೆ, ಕೆಲಸ ಹುಡುಕಿಕೊಂಡು ಬರುವವರದ್ದು ಮತ್ತೊಂದು ಚಿಂತಾಜನಕ ಸ್ಥಿತಿ. ಬೆಂಗಳೂರಿನ ಬಹುತೇಕ ಕಟ್ಟಡ ಕಾರ್ಮಿಕರಲ್ಲಿ ಉತ್ತರ ಕರ್ನಾಟಕದ ಭಾಗದವರೇ ತುಂಬಿದ್ದಾರೆ. ಹಾಗಾಗಿ ಅಲ್ಲಿ ಕೆಲಸವನ್ನು ಸೃಷ್ಟಿ ಮಾಡಲು ಯಾಕೆ ಆಗುತ್ತಿಲ್ಲ? ಕಟ್ಟಡ ಮುಗಿಯೋತನಕ ಅಲ್ಲಿಯೇ ಚಿಕ್ಕದೊಂದು ಜೋಪಡಿ ಹಾಕಿಕೊಂಡು ಅದು ಮುಗಿದ ತಕ್ಷಣ ಮತ್ತೊಂದು ಜೋಪಡಿಗೆ ಹಾರುವಾಗ ಯಾಕೆ ಅಖಂಡ ಕರ್ನಾಟಕದ ಕಲ್ಪನೆ ನಮ್ಮೊಳಗೆ ಮನುಷ್ಯತ್ವದ ಮಾತುಗಳನ್ನು ಆಡಿಸುವುದಿಲ್ಲ?
ಎಂಟು ತಿಂಗಳ ಹಿಂದೆಯಷ್ಟೇ ಬಾಗಲಕೋಟೆಯ ಕೂಡಲಸಂಗದಮದಲ್ಲಿ ಹಮ್ಮಿಕೊಂಡಿದ್ದಂತಹ ಸಾಹಿತ್ಯದ ಕಾರ್ಯಕ್ರಮವೊಂದನ್ನು ಮುಗಿಸಿ ಹೊರಡುವಾಗ ರಾತ್ರಿ ಎಂಟು ಗಂಟೆಯಾಗಿತ್ತು. ನಮ್ಮ ವಾಹನ ಹಳ್ಳಿಗಳನ್ನು ದಾಟಿ ಮುಂದೆ ಮುಂದೆ ಸಾಗುವಾಗ ದಾರಿ ಬದಿಯಲ್ಲಿ ಮಹಿಳೆಯರು ಚೆಂಬು ಹಿಡಿದು ಸಾಲು ಸಾಲಾಗಿ ಹೋಗುತ್ತಿದ್ದ ದೃಶ್ಯ ನನ್ನಲ್ಲಿ ಇನ್ನಿಲ್ಲದ ಕಳವಳವನ್ನುಂಟು ಮಾಡಿತ್ತು.

ಬೆಂಗಳೂರಿಗೆ ದಿಂಡಿ ದಿಂಡಿಯಾಗಿ ತೆರೆದುಕೊಳ್ಳುವ ಅವಕಾಶಗಳು ಉತ್ತರ ಕರ್ನಾಟಕದಲ್ಲಿ ತೀರಾ ಕಡಿಮೆ. ಲಾಭವೇ ಉದ್ಯಮದ ಉದ್ದೇಶವಾಗಿರುವಾಗ ಅದು ಸಹಜ. ಆದರೆ, ಅಲ್ಲಿನ ಸಂಪನ್ಮೂಲಗಳನ್ನು ಕ್ರೂಢಿಕರಿಸಿ ಉದ್ಯೋಗ ಸೃಷ್ಟಿ ಮಾಡಬಹುದಲ್ಲ? ಅಲ್ಲಷ್ಟು ಸರಕಾರಿ ಇಲಾಖೆಗಳ ಕಚೇರಿ ತೆರೆದು, ಅವರ ಕಷ್ಟಗಳಿಗೆ ಸ್ಪಂದಿಸಬಹುದಲ್ಲ? ಉತ್ತರ ಕರ್ನಾಟಕವೆಂಬುದು ಅಸಮಾನತೆಯ ವಿಳಾಸವಾಗಿಬಿಟ್ಟಿದೆ. ಹಾಗಂತ ನಾನು ನೀವು ಏನು ಮಾಡಲು ಸಾಧ್ಯ? ಇದೆಲ್ಲವೂ ಮಾಡಬೇಕಾದ ರಾಜಕಾರಣಿಗಳು ದೂರದೃಷ್ಠಿಹೀನರಾಗಿರುವಾಗ, ಅವರಿಂದ ಆರಿಸಿ ಬರುವ ಶಾಸಕರು ಬೆಂಗಳೂರಿನ ಆಸ್ತಿದಾರರಾಗಲು ಇಚ್ಚಿಸುವಾಗ ನಾವೇನು ಮಾಡಲು ಸಾಧ್ಯ?

ಹಾಗಂತ ಸುಮ್ಮನಿರಲು ಆಗುತ್ತಿಲ್ಲ. ಆ ನೆಲಕ್ಕೆ ಕಾಲಿಟ್ಟಾಗ ಅಗಾಧ ಪ್ರೀತಿ ಕೊಡುವ, ತನ್ನ ಮನೆಯ ಸದಸ್ಯನೇನೋ ಅನ್ನುವಂತೆ ಕಕ್ಕುಲಾತಿ ತೋರಿಸುವ, ಇವ ನಮ್ಮವ ಇವ ನಮ್ಮವ ಎಂದು ಅಪ್ಪಿಕೊಳ್ಳುವಂತಹ ಅಲ್ಲಿನ ಮನಸುಗಳ ಜೊತೆ ಕೈ ಜೋಡಿಸಬೇಕಿದೆ. ನಾವು ಮಾಡುವ ಕೆಲಸದಲ್ಲಿಯೇ ಅಂತಹ ಅಖಂಡತೆಯನ್ನು ಉಳಿಸಿಕೊಳ್ಳುವಂತಹ ಕೆಲಸ ಏನಾದರೂ ಸಾಧ್ಯವಾದರೆ ಅದಕ್ಕಿಂತ ಖುಷಿ ಏನಿರಲು ಸಾಧ್ಯ. ಆ ಹಿನ್ನಲೆಯಲ್ಲಿ ಈ ಉತ್ತರಪರ್ವ ಒಂದು ಮಹತ್ವದ ಹೆಜ್ಜೆ ಎಂದು ಭಾವಿಸಿದ್ದೇನೆ.

ಈ ಉತ್ತರಪರ್ವದಲ್ಲಿ 25 ಕೃತಿಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದ್ದೇವೆ. ಆ ಎಲ್ಲಾ ಕೃತಿಗಳು ಆ ಭಾಗದವರದ್ದೇ ಆಗಿರುತ್ತವೆ ಮತ್ತು ಅಲ್ಲಿನ ಕಥೆಗಳನ್ನೇ ಹೇಳುತ್ತವೆ. ಲೇಖಕರು ತಾವು ಬರೆಯಬೇಕೆಂದಿರುವ ವಿಷಯವನ್ನು ಹತ್ತು ಪುಟಗಳಿಗಿಳಿಸಿ, ನಮಗೆ ಕಳುಹಿಸಿದರೆ ನಮ್ಮ ಸಂಪಾದಕೀಯ ಮಂಡಳಿ ಅದನ್ನು ಓದುತ್ತದೆ. ಉತ್ತಮ ಕೃತಿಯಾಗಬಲ್ಲದು ಎಂದೆನಿಸಿದರೆ, ಮುಂಗಡವಾಗಿ ರಾಯಧನದ ಒಂದು ಭಾಗವನ್ನು ನಾವು ಪಾವತಿಸುತ್ತೇವೆ. ಹೊಸಬರಾದರೆ, ಅವರಿಗೆ ಆಂಗ್ಲ ಪ್ರಕಾಶನ ಸಂಸ್ಥೆಗಳ ಹಾಗೆ ಸಂಪಾದಕರ ನೆರವನ್ನು ಒದಗಿಸುತ್ತೇವೆ. ಈ ಪ್ರಕ್ರಿಯೆ ಮುಗಿದ ಕೂಡಲೇ ಉತ್ತರ ಕರ್ನಾಟಕದ ಸಾಹಿತಿಗಳನ್ನು ರಾಜಧಾನಿಗೆ ಕರೆಸಿ, ದಕ್ಷಿಣದ ಸಾಹಿತಿಗಳ ಜೊತೆ ಮುಖಾಮುಖಿಯಾಗಿಸಿ ಇಡೀ ದಿನದ ‘ಉತ್ತರ ಕರ್ನಾಟಕದ ಸಾಹಿತ್ಯೋತ್ಸವ’ ಆಚರಿಸುವ ಸಂಕಲ್ಪ ಹೊಂದಿದ್ದೇವೆ.
ಬತ್ತಿ ಹಿಗ್ಗಿದಷ್ಟು ರುಚಿ ಹೆಚ್ಚು. ಬನ್ನಿ ಹಂಚಿಕೊಂಡು ತಿನ್ನೋಣ.

ಈ ಉತ್ತರ ಪರ್ವದ ಸಂಪೂರ್ಣ ನೇತೃತ್ವವನ್ನು ನನ್ನೊಲುಮೆಯ ಲೇಖಕರಾದ ರಾಜಶೇಖರ್ ಮಠಪತಿ ಅವರು ನಿರ್ವಹಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ www.veeralokabooks.com/uttaraparva/ ಗೆ ಭೇಟಿ ಕೊಡಿ..

ಹೆಚ್ಚಿನ ಮಾಹಿತಿಗಾಗಿ [email protected] ಗೆ ಮೇಲ್ ಮಾಡಿ

#ವೀರಲೋಕ #ಉತ್ತರಪರ್ವ

ನಿಮ್ಮ
ವೀರಕಪುತ್ರ ಶ್ರೀನಿವಾಸ