ನವದೆಹಲಿ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಶಿಫಾರಸನ್ನು ಟೆಲಿಕಾಂ ಸೇವಾ ಪೂರೈಕೆದಾರರು ಜಾರಿ ಮಾಡಿದರೆ ಕರೆ ಮಾಡಿದವರ ನಂಬರ್ ಬದಲು ಹೆಸರೇ ಕಾಣಲಿದೆ.
ತನ್ನ ಬಳಕೆದಾರರಿಗೆ ಕಾಲರ್ ಐಡಿ ಸೌಲಭ್ಯ ಅಥವಾ ಕರೆ ಮಾಡುವವರ ನಂಬರ್ ಬದಲಿಗೆ ಅವರ ಹೆಸರನ್ನು ತೋರಿಸುವ (ಸಿಎನ್‌ಪಿ) ವೈಶಿಷ್ಟ್ಯಗಳನ್ನು ಪೂರಕ ಸೇವೆಗಳಾಗಿ ಒದಗಿಸುವಂತೆ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಶಿಫಾರಸು ಮಾಡಿದೆ.
ಬಳಕೆದಾರರ ಫೋನ್ TRAI ಒದಗಿಸಿದ ಹೆಸರನ್ನು ಪ್ರದರ್ಶಿಸುತ್ತದೆ. ಎಲ್ಲಾ ಸೇವಾ ಪೂರೈಕೆದಾರರು ವಿನಂತಿಯ ಮೇರೆಗೆ ತಮ್ಮ ದೂರವಾಣಿ ಚಂದಾದಾರರಿಗೆ ಕರೆ ಮಾಡುವವರ ಹೆಸರು ತೋರಿಸುವ (CNAP) ಪೂರಕ ಸೇವೆ ಒದಗಿಸಬೇಕು ಎಂದು TRAI ಹೇಳಿಕೆಯಲ್ಲಿ ತಿಳಿಸಿದೆ.
ದೂರಸಂಪರ್ಕ ಇಲಾಖೆ ಈ ಶಿಫಾರಸನ್ನು ಒಪ್ಪಿಕೊಂಡರೆ ಒಂದು ನಿರ್ದಿಷ್ಟ ದಿನಾಂಕದ ನಂತರ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್‌ಗಳಲ್ಲಿ CNAP ವೈಶಿಷ್ಟ್ಯ ಲಭ್ಯವಾಗುವಂತೆ ಮಾಡಲು ಸರ್ಕಾರ ಸೂಚನೆ ನೀಡಬಹುದು.
ಕರೆ ಮಾಡುವವರ ಹೆಸರು ಬಾರದ ಹಿನ್ನೆಲೆಯಲ್ಲಿ ಅಪರಿಚಿತರ ಕರೆ ಸ್ವೀಕರಿಸಬೇಕಾಗುತ್ತದೆ ಎಂದು ಅನೇಕ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದರಿಂದ ಈ ವೈಶಿಷ್ಟ್ಯಗಳ ಅಗತ್ಯ ಕಂಡುಬಂದಿದೆ. ಇವುಗಳಲ್ಲಿ ಬಹುತೇಕ ನೋಂದಣಿಯಾಗದ ಟೆಲಿಮಾರ್ಕೆಟರ್‌ಗಳಿಂದ ಬರುವಂತಹ ಕರೆಗಳಾಗಿವೆ.
ಬೃಹತ್ ಸಂಪರ್ಕಗಳು ಮತ್ತು ವ್ಯಾಪಾರ ಸಂಪರ್ಕ ಹೊಂದಿರುವ ಚಂದಾದಾರರ ಘಟಕಗಳಿಗೆ ಗ್ರಾಹಕರ ಅರ್ಜಿ ನಮೂನೆಯಲ್ಲಿ (CAF) ಕಂಡುಬರುವ ಹೆಸರಿನ ಬದಲಿಗೆ ತಮ್ಮ “ಆದ್ಯತೆಯ ಹೆಸರನ್ನು” ಪ್ರಸ್ತುತಪಡಿಸುವ ಸೌಲಭ್ಯವನ್ನು ನೀಡಲಾಗುವುದು ಎಂದು TRAI ಶಿಫಾರಸು ಮಾಡಿದೆ.