ಹಾವೇರಿ :
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿರೋಧಪಕ್ಷದವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
*ಪಕ್ಷದ ವರಿಷ್ಠರಿಗೆ ಅಂತಿಮ ಪಟ್ಟಿ*
ನಿಗಮಮಂಡಳಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಅಧ್ಯಕ್ಷರ ನೇಮಕಾತಿಗೆ ಮೊದಲ ಹಂತದಲ್ಲಿ ಶಾಸಕರನ್ನು ಪರಿಗಣಿಸಲಾಗುವುದು. ನಾನು ಹಾಗೂ ಉಪಮುಖ್ಯಮಂತ್ರಿಗಳು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಪಕ್ಷದ ವರಿಷ್ಠರಿಗೆ ನೀಡಲಾಗಿದ್ದು, ಅನುಮತಿಯನ್ನು ನಿರೀಕ್ಷಿಸಲಾಗಿದೆ ಎಂದರು.
*150 ದಿನಗಳ ಉದ್ಯೋಗ ನೀಡಲು ಕೇಂದ್ರವಿನ್ನೂ ಒಪ್ಪಿಗೆ ಸೂಚಿಸಿಲ್ಲ :*
ಬರಪರಿಹಾರದಲ್ಲಿ ರೈತರ ಪಾಲಿನ ಮೊತ್ತದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬೆಳೆಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ನಿಗದಿಯಾಗಿರುವ ಪರಿಹಾರ ಮೊತ್ತವನ್ನು ನೀಡಲಾಗುವುದು. ಹಾವೇರಿ ಜಿಲ್ಲೆಗೆ ಕುಡಿಯುವ ನೀರು, ಮೇವು, ಉದ್ಯೋಗ ಸೇರಿದಂತೆ ವಿವಿಧ ಕಾರ್ಯಗಳಿಗೆ 226 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲಾಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಬರಗಾಲದ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವುದಲ್ಲದೇ, ಕುಡಿಯುವ ನೀರಿಗೆ ಕೊರತೆ ಬರದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಎನ್ ಆರ್ ಜಿ ಎಸ್ ಅಡಿ ಬರಗಾಲದ ಪರಿಸ್ಥಿತಿಯಲ್ಲಿ 150 ಮಾನವದಿನಗಳ ಉದ್ಯೋಗ ನೀಡುವ ಕೇಂದ್ರದ ನಿಯಮವಿದೆ. ಈ ಕ್ರಮಕ್ಕೆ ಕೇಂದ್ರ ಸರ್ಕಾರದವರು ಅನುಮತಿ ನೀಡಬೇಕಿದ್ದು, ಇದುವೆರಗೆ ಈ ಅನುಮತಿಯನ್ನು ನೀಡಿಲ್ಲ ಎಂದರು.
*ರಾಜ್ಯದ ದುಡ್ಡು ರಾಜ್ಯಕ್ಕೆ ನೀಡುತ್ತಿಲ್ಲ:*
ಇಡೀ ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲ ಪರಿಸ್ಥಿತಿಯಿದೆ. ರಾಜ್ಯಕ್ಕೆ ಬರ ಅಧ್ಯಯನಕ್ಕಾಗಿ ಕೇಂದ್ರ ತಂಡ ಪರಿಶೀಲಿಸಿದೆ. ಆದರೂ ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ ದುಡ್ಡನ್ನು ರಾಜ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ ಎಂದರು.
*ವಕೀಲನಾಗಿರುವುದರಿಂದಲೇ ಕಾನೂನು ಬಾಹಿರ ತನಿಖೆಯ ಆದೇಶ ವಾಪಸ್ :*
ಕುಮಾರಸ್ವಾಮಿಯವರು ವಕೀಲರಾಗಿದ್ದ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಅವರ ತನಿಖೆಯ ಆದೇಶವನ್ನು ವಾಪಸ್ಸು ಪಡೆದಿರುವುದು ಸರಿಯೇ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ,ನಾನು ವಕೀಲನಾಗಿರುವುದರಿಂದ, ಹಿಂದಿನ ತನಿಖಾ ಆದೇಶ ಕಾನೂನು ರೀತ್ಯವಿರಲಿಲ್ಲವೆಂದು ವಾಪಸ್ಸು ಪಡೆಯಲಾಗಿದೆ. ನನಗೆ ಕಾನೂನಿನ ಅರಿವು ಇಲ್ಲದಿದ್ದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯಂತೆ ನಾನು ಕಾನೂನುಬಾಹಿರವಾಗಿದ್ದರೂ ತನಿಖೆಯ ಬಗ್ಗೆ ಸಮ್ಮತಿಸುತ್ತಿದೆ ಎಂದರು.