ಹಾವೇರಿ :
ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದೇ ಇಲ್ಲ. ಈ ಜನ್ಮದಲ್ಲಿ ನಾವು ಮಾಡುವ ಕೆಲಸಗಳೇ ಮುಖ್ಯ. ಈ ಕಾರಣಕ್ಕೆ ಬಸವಾದಿ ಶರಣರು ಮತ್ತು ಕನಕದಾಸರು ಕರ್ಮ ಸಿದ್ಧಾಂತ ಮತ್ತು ಜನ್ಮದ ಮೌಡ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶ್ರೀ‌ ಕಾಗಿನೆಲೆ ಮಹಾಸಂಸ್ಥಾನ ಕನಕ‌ಗುರುಪೀಠದಲ್ಲಿ ಆಯೋಜಿಸಿದ್ದ 536ನೇ ಶ್ರೀ ಕನಕ ಜಯಂತ್ಯೋತ್ಸವ ಮತ್ತು ಭಾವೈಕ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕಾಗಿನೆಲೆ ಪೀಠ ಯಾವತ್ತೂ ಒಂದು ಜಾತಿಯ ನೆಲೆ ಆಗಬಾರದು. ಇದು ಎಲ್ಲಾ ಶೋಷಿತ ಸಮುದಾಯಗಳ ನೆಲೆ ಆಗಬೇಕು. ಕನಕ ಜಯಂತಿ ಪ್ರಯುಕ್ತ ಭಾವೈಕ್ಯತಾ ಸಮಾವೇಷ ಏರ್ಪಿಡಿಸಿರುವ ಶ್ರೀ ಮಠದ ಗುರುಗಳಿಗೆ ಹೃದಯಪೂರ್ವಕವಾಗಿ ವಂದಿಸುತ್ತೇನೆ. ಇದು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಅಪಾರವಾಗಿ ಮೆಚ್ಚಿಕೊಂಡರು.

ನಾವ್ಯಾರೂ ಅರ್ಜಿ ಹಾಕೊಂಡು ಜಾತಿ-ಧರ್ಮ ಆರಿಸಿಕೊಂಡು ಹುಟ್ಟಿಲ್ಲ. ಮೊದಲು ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು. ಜಾತಿ-ಧರ್ಮ ರಹಿತ ಮನುಷ್ಯ ಪ್ರೇಮವನ್ನೇ ಕನಕದಾಸರು ಜಗತ್ತಿಗೆ ನೀಡಿದರು ಎಂದು ವಿವರಿಸಿದರು.

ಕನಕಗುರು ಪೀಠ ಸ್ಥಾಪಿಸುವಾಗ ಇದನ್ನು ಕುರುಬರ ಮಠ ಆಗಬೇಕು ಎಂದು ಇಚ್ಚಿಸಲೇ ಇಲ್ಲ. ಎಲ್ಲಾ ಶೋಷಿತ ಧರ್ಮಗಳ ಮಠ ಆಗಬೇಕು ಎನ್ನುವುದು ನಮ್ಮಗಳ ಉದ್ದೇಶ ಆಗಿತ್ತು ಎಂದು ನೆನಪು ಮಾಡಿಕೊಂಡರು.

ಧರ್ಮ ಇರುವುದು ನಮಗಾಗಿ. ನಾವು ಧರ್ಮಕ್ಕಾಗಿ ಅಲ್ಲ. ಅದಕ್ಕೇ ಕನಕದಾಸರು ಕುಲ ಕುಲವೆಂದು ಬಡಿದಾಡದಿರಿ ಎಂದು ಹೇಳಿದ್ದು. ಬಸವಣ್ಣನವರು, “ಇವ ನಮ್ಮವ ಇವ ನಮ್ಮವ” ಎಂದಿದ್ದು. ಕುವೆಂಪು ಅವರು, “ಹುಟ್ಟುವಾಗ ಎಲ್ಲರೂ ವಿಶ್ವ ಮಾನವರು” ಎಂದರು, ಅಂಬೇಡ್ಕರ್ ಅವರು ಸಮ ಸಮಾಜದ ಬಗ್ಗೆ ಹೇಳಿದರು. ಬಸವಾದಿ ಶರಣರು, ಕನಕದಾಸರು, ಅಂಬೇಡ್ಕರ್, ಕುವೆಂಪು, ಸೂಫಿಗಳ ಆಶಯಗಳೆಲ್ಲಾ ಒಂದೇ ಆಗಿತ್ತು. ಆದ್ದರಿಂದ ನಾವುಗಳು ಇವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಲ್ಲೇಶಪ್ಪ ಹೊರಪೇಟೆ ಅವರ ಕನಕನ ಹೆಜ್ಜೆ ಮಕ್ಕಳ ಕಾದಂಬರಿಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು.

ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ಮಹಾಸಿದ್ದೇಶ್ವರಿ ದೇವರುಗಳ ಕುಂಭಾಭಿಷೇಕ ನೆರವೇರಿಸಿದರು.

ಹುಬ್ಬಳ್ಳಿ, ಮೂರುಸಾವಿರ ಮಠದ ಶ್ರೀಮನ್ ಮಹಾರಾಜ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಹಜರತ್ ಬಿಜಾಪುರ ಹಾಶಿಮ್ ಪೀರ್ ದರ್ಗಾದ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ, ಕರ್ನಾಟಕ ಧರ್ಮಪ್ರಾಂತ್ಯದ ಧರ್ಮಗುರು ಡಾ.ಫಾ.ಅಲ್ಫೋನ್ಸ್ ಫರ್ನಾಂಡೀಸ್ ಯೇಸ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಪ್ರಾಥಮಿಕ‌ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.