ನವದೆಹಲಿ: ಮಾಜಿ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿ ಅವರು ಬುಧವಾರ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಮತ್ತೊಂದು ದೊಡ್ಡ ಹೊಡೆತವಾಗಿದ್ದು, ಶಾಸ್ತ್ರಿ ಇಂದು, ಬುಧವಾರ ಮುಂಜಾನೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್‌ ತೊರೆದ ಕೆಲವು ಗಂಟೆಗಳ ನಂತರ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ್ದಾರೆ. ಲಕ್ನೋದಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ನಂಬಿರುವ ತಾನು ಬಿಜೆಪಿಗೆ ಸೇರುವುದಾಗಿ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಾನು ಲಾಲಬಹದ್ದೂರ್ ಶಾಸ್ತ್ರಿಯವರ ‘ಜೈ ಜವಾನ್, ಜೈ ಕಿಸಾನ್’ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ… ಎಂದು ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ಮತ್ತು ಹರಿಕೃಷ್ಣ ಶಾಸ್ತ್ರಿ ಅವರ ಪುತ್ರರಾಗಿರುವ ಶಾಸ್ತ್ರಿ ಅವರು ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

X ನಲ್ಲಿ ವಿಭಾಕರ ಶಾಸ್ತ್ರಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟ್ಯಾಗ್ ಮಾಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ವಿಷಯವನ್ನು ಹಂಚಿಕೊಂಡಿದ್ದಾರೆ. ಮಾನ್ಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ, ನಾನು ಈ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಬರೆದಿದ್ದಾರೆ.

ವಿಭಾಕರ ಶಾಸ್ತ್ರಿ ಅವರ ರಾಜೀನಾಮೆಯು ಕಾಂಗ್ರೆಸ್ ಪಕ್ಷದ ಇತರ ಇಬ್ಬರು ಪ್ರಮುಖರಾದ ಅಶೋಕ ಚವಾಣ ಮತ್ತು ಬಾಬಾ ಸಿದ್ದಿಕ್ ಪಕ್ಷಕ್ಕೆ ಮಹಾರಾಷ್ಟ್ರ ಘಟಕವನ್ನು ತೊರೆದ ಕೆಲವು ದಿನಗಳ ನಂತರ ಬಂದಿದೆ. ಸಿದ್ದಿಕ್ ಎನ್‌ಸಿಪಿಯ ಅಜಿತ್ ಪವಾರ್ ಬಣ ಸೇರಿದರೆ, ಚವಾಣ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ನಾಯಕರಾದ ಅಶೋಕ ಚವಾಣ, ಮಿಲಿಂದ್ ದಿಯೋರಾ, ಬಾಬಾ ಸಿದ್ದಿಕಿ, ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಪ್ರಿಯಾಂಕಾ ಚತುರ್ವೇದಿ, ಸುಶ್ಮಿತಾ ದೇವ್, ಆರ್‌ಪಿಎನ್ ಸಿಂಗ್, ಜೈವೀರ ಶೆರ್ಗಿಲ್ ಮುಂತಾದವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಇತರ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದು, ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್ ನಲ್ಲಿ ಸರಣಿ ನಿರ್ಗಮನಕ್ಕೆ ಸಾಕ್ಷಿಯಾಗಿದೆ. .