ಬಾಲ್ಯದಲ್ಲಿ ನಾವು ಪ್ರಸಿದ್ಧ ಅರೇಬಿಯನ್ ಕುದುರೆ ಮತ್ತು ಕಾಠೇವಾಡಿ ಕುದುರೆಗಳ ಬಗ್ಗೆ ಓದಿದ್ದೆವು. ಯುದ್ಧಕಾಲದಲ್ಲಿ ಈ ಅಶ್ವದಳವನ್ನು ಬಳಸಿದ ಹಲವು ಪೌರಾಣಿಕ, ಐತಿಹಾಸಿಕ, ಆಧುನಿಕ ಕಾಲದ ಯುದ್ಧಗಳ ಕುರಿತಾಗಿಯೂ ಓದಿದ್ದುಂಟು. ನೆಪೋಲಿಯನ್‌ ಬೊನಾಪಾರ್ಟನ ಮಾರೆಂಗೊ ಎಂಬ ಯುದ್ಧದ ಕುದುರೆ, ರಾಣಾ ಪ್ರತಾಪಸಿಂಹನ ಚೇತಕ್ ಎಂಬ ಕುದುರೆಗಳ ಬಗ್ಗೆ ಕೇಳಿ ತಿಳಿದಿದ್ದೆವು. ರಾಜಸ್ಥಾನದ ಹಳದಿಘಾಟ್ ನಲ್ಲಿ ಈ ಚೇತಕ್ ಕುದುರೆಯ ಸಾಹಸ ಮತ್ತು ತ್ಯಾಗದ ಕತೆ ನಮ್ಮ ಕಣ್ಣೆದುರಿಗೆ ಬರುತ್ತದೆ. .
ಆದರೆ ಈ ಕುದುರೆಗಳ ಬದುಕಿನ ಇತಿಹಾಸವನ್ನು ನಾವು ತಿಳಿದದ್ದು ಕಡಿಮೆಯೇ. ಜಾಗತಿಕವಾಗಿ ಅರೇಬಿಯನ್ ಕುದುರೆಗಳು ಬಹಳ ಪ್ರಸಿದ್ಧ. ಅದಕ್ಕೆ ವಿಶೇಷ ಕಾರಣಗಳೂ ಇವೆ. ಭಾರತಕ್ಕೆ ಈ ಅರೇಬಿಯನ್ ತಳಿಯ ಕುದುರೆಗಳು ಬಂದಿದ್ದು ಮೊಘಲರ ಮತ್ತು ಬ್ರಿಟಿಷರ ಕಾಲದಲ್ಲಿ.( ಭಾರತದ್ದೇ ಆದ ತಳಿಗಳು ಬೇರೆ. ). ಅರೇಬಿಯನ್ ಅಶ್ವತಳಿಯ ಕತೆ ಏಳನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಈ ಕುದುರೆಗಳ ವೈಶಿಷ್ಟ್ಯವೆಂದರೆ ಅವುಗಳ ವೇಗ, ತ್ರಾಣ, ಸೌಂದರ್ಯ, ಸಹಿಷ್ಣುತೆ , ಬುದ್ಧಿವಂತಿಕೆ ಮತ್ತು ಸೌಮ್ಯ ಸ್ವಭಾವ ಮೊದಲಾದ ಅಂಶಗಳು. ಅರೇಬಿಯನ್ ಕುದುರೆಯ ಮುಖ್ಯ ಲಕ್ಷಣಗಳೆಂದರೆ ಅವುಗಳ ಬೆಣೆಯಾಕಾರದ ತಲೆಯ ಭಾಗದ ವಿಶಿಷ್ಟ ಆಕಾರ, ಎತ್ತರಕ್ಕೆದ್ದ ಬಾಲದ ಗೊಂಡೆ, ಅಗಲ ಹಣೆ, ದೊಡ್ಡ ಕಣ್ಣು, ಸಣ್ಣ ಮುಖಭಾಗ, ಕಣದಣುಗಳ ನಡುವಿನ ಹಣೆಯ ಉಬ್ಬುವಿಕೆ, ಕಮಾನಿನ ಕುತ್ತಿಗೆ ಇತ್ಯಾದಿ.
ಅರೇಬಿಯನ್ನರಿಗೆ ಒಂಟೆಗಳಂತೆಯೇ ತಮ್ಮ ಕುದುರೆಗಳ ಕುರಿತೂ ಬಹಳ ಅಭಿಮಾನ. ಪಾರಂಪರಿಕವಾಗಿ ಅರಬ್ಬರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ಉಳಿದುಬಂದ ಕುದುರೆಗಳು ಒಟ್ಟೋಮನ್ ಸಾಮ್ರಾಜ್ಯದ ಕಾಲಕ್ಕೆ ಜಗತ್ತಿನ ಇತರ ಭಾಗಗಳಿಗೆ ಹರಡಿಕೊಂಡವು. ಸಾಮಾನ್ಯವಾಗಿ ಅರಬ್ ಕುದುರೆಗಳು ೨೩ ಕಶೇರುಖಂಡಗಳನ್ನು ಹೊಂದಿರುತ್ತಿದ್ದು ಸಣ್ಣ ಆಕಾರ, ಚಾಚಿಕೊಂಡ ಕಣ್ಣು, ಅಗಲವಾದ ಮೂಗಿನ ಹೊಳ್ಳೆ, ಚಿಕ್ಕ ಬೆನ್ನು, ಸರಾಸರಿ ಎತ್ತರ ೬೦ ಇಂಚು, ತೂಕ ೮೦೦ ರಿಂದ ೧೦೦೦ ಪೌಂಡ್ , ಬಲವಾದ ಕಾಲು, ಉತ್ತಮ ಗೊರಸು, ರೇಷ್ಮೆಯಂತಹ ಮೃದು ಕೂದಲು ಇತ್ಯಾದಿ ಲಕ್ಷಣಗಳಿಂದ ಕೂಡಿರುತ್ತವೆ.
ಹಿಂದೆ ಯುದ್ಧ ಮತ್ತು ವ್ಯಾಪಾರಗಳಿಗೆ ‌ಬಳಸುತ್ತಿದ್ದ ಕುದುರೆಗಳು ಈಗ ಹೆಚ್ಚಾಗಿ ರೇಸ್ ಗಳಿಗೆ ಬಳಸಲಾಗುತ್ತಿದೆ. ಕುದುರೆಗಳು ಆರುಬಗೆಯ ಅನುವಂಶಿಕ ಕಾಯಿಲೆಗಳಿಗೆ ತುತ್ತಾಗುತ್ತವೆನ್ನಲಾಗಿದೆ. ರೇಸುಗಳಿಗೆ ಉತ್ತಮ ಕುದುರೆಗಳನ್ನು ಆಯ್ಕೆ ಮಾಡುವಾಗ ಅವುಗಳ ಸೊಂಟದ ಉದ್ದ ಮತ್ತು ಚುರುಕುತನ ಗಮನಿಸಲಾಗುತ್ತದೆ.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಅಶ್ವಗಳ ಬಳಕೆ ಇದ್ದೇಇದೆ ಮತ್ತು ಅಶ್ವಶಾಸ್ತ್ರ/ಅಶ್ವ ವಿದ್ಯೆಯಲ್ಲಿ ಪಳಗಿದವರೂ ಆಗಿದ್ದರು. ಅಶ್ವಮೇಧ ಯಾಗ ರಾಜರಿಗೆ ಪ್ರತಿಷ್ಠೆಯ ವಿಷಯವಾಗಿತ್ತು.