‌ ಒಂಟೆಗಳೆಂದರೆ ಮರುಭೂಮಿಯ ಹಡಗುಗಳು ಎನ್ನುವುದು ಎಲ್ಲರಿಗೂ ತಿಳಿದಿದೆ. ಅವು ಮರುಭೂಮಿಗೇ ಮೀಸಲಾದ ಪ್ರಾಣಿಗಳು. ಅದಕ್ಕೆ ಅನೇಕ ಕಾರಣಗಳೂ ಇವೆ. ಸಾಮಾನ್ಯವಾಗಿ ಒಂಟೆಗಳಲ್ಲಿ ಎರಡು ವಿಧ. ಒಂದು ಗೂನಿನ ಒಂಟೆಗೆ ಡ್ರೊಮೆಡರಿ ಎಂದು, ಎರಡು ಗೂನಿನ ಒಂಟೆಗಳಿಗೆ ಬ್ಯಾಕ್ಟ್ರಿಯನ್ ಒಂಟೆಗಳೆಂದೂ ಕರೆಯುತ್ತಾರೆ. ಡ್ರೊಮೆಡರಿ ಒಂಟೆಗಳು ಓಟಕ್ಕೆ ಹೆಸರಾಗಿವೆ. ಇದು ಗ್ರೀಕ ಭಾಷೆಯ ” ಡ್ರಾಮೈನ್” ಎಂಬ ಶಬ್ದದಿಂದ ಬಂದಿದ್ದು. ಅದಕ್ಕೆ ಓಡುವುದು ಎಂಬರ್ಥವಿದೆ. ಇವು ತಾಸಿಗೆ ಸರಾಸರಿ ೪೦ ಮೈಲು ಅಥವಾ ೬೪ ಕಿ. ಮೀ. ತನಕ ಓಡಬಲ್ಲವು.
ಒಂಟೆಯ ವೈಶಿಷ್ಟ್ಯಗಳು
ಈ ಒಂದು ಗೂನಿನ ಒಂಟೆ ೮೦ ಪೌಂಡ್ ಕೊಬ್ಬು ಸಂಗ್ರಹಿಸಿಟ್ಟುಕೊಳ್ಳಬಲ್ಲುದು. ನೀರಿಲ್ಲದೆಯೂ ೧೦೦ ಮೈಲು ಪ್ರಯಾಣ ಮಾಡಬಲ್ಲುದು. ೧೨೦. ಫ್ಯಾ. ವರೆಗೆ ಉಷ್ಣತೆ ತಡೆದುಕೊಳ್ಳಬಲ್ಲವು. ಕೇವಲ ೧೩ ನಿಮಿಷಗಳಲ್ಲಿ ೩೦ ಗ್ಯಾಲನ್ ನೀರು ಕುಡಿಯಬಲ್ಲವು. ಇವುಗಳ ಮೂಗಿನ ಹೊಳ್ಳೆಗಳು ಮುಚ್ಚಿರುವುದರಿಂದ ಮರಳಿನಿಂದ ರಕ್ಷಣೆ ಪಡೆಯಬಲ್ಲವು. ಪೊದೆ ಹುಬ್ಬುಗಳು ಎರಡು ಸಾಲಿನಲ್ಲಿರುವ ರೆಪ್ಪೆ ಗಳು ಕಣ್ಣಿಗೆ ರಕ್ಷಣೆ ನೀಡಬಲ್ಲವು. ಗಟ್ಟಿಯಾದ ದೊಡ್ಡ ದಪ್ಪ ತುಟಿಗಳಿರುವುದರಿಂದ ಮರುಭೂಮಿಯ ಒಣ ಮುಳ್ಳಿನ ಸಸ್ಯಗಳನ್ನು ತಿನ್ನಬಲ್ಲವು. ಒಂಟೆ ಈ ಎಲ್ಲ ತನ್ನ ವೈಶಿಷ್ಟ್ಯಗಳಿಂದಾಗಿಯೇ ಮರಳುಗಾಡಿಗೆ ಯೋಗ್ಯವೆನಿಸುವ ಪ್ರಾಣಿಯಾಗಿದೆ.
ಒಂಟೆಗಳ ಓಟ
ಒಂಟೆಗಳ ಓಟ ಅರಬ್ ನಾಡಿನ ಒಂದು ಪ್ರಾಚೀನ ಜಾನಪದ ಕ್ರೀಡೆಯ ಸ್ವರೂಪದಲ್ಲಿ ಬೆಳೆದುಬಂದಿದೆ. ಇದಕ್ಕೆ ಏಳನೇ ಶತಮಾನದಷ್ಟು ಹಿಂದಿನ ಇತಿಹಾಸವಿದೆ. ಇಲ್ಲಿಯ ಮುಲ ಬೆಡೋಯಿನ ಬುಡಕಟ್ಟು ಜನಸಮುದಾಯದ ಹಬ್ಬಹರಿದಿನ ಮದುವೆ ಉತ್ಸವಗಳಲ್ಲಿ ಒಂಟೆಗಳ ಕಿರು ಓಟದ ಸ್ಪರ್ಧೆಗಳನ್ನೇರ್ಪಡಿಸಲಾಗುತ್ತಿತ್ತು. ಅದು ಇಂದು ಒಂದು ಬಹುದೊಡ್ಡ ವ್ಯಾವಹಾರಿಕ ಸ್ಪರ್ಧೆಯ ರೂಪದಲ್ಲಿ ಬೆಳೆದುನಿಂತಿದೆ. ಅರಬ್ ರಾಷ್ಟ್ರಗಳಲ್ಲೆಲ್ಲ ಈ‌ ಒಂಟೆ ಓಟದ ಹಲವು ಸ್ಪರ್ಧೆಗಳು ನಡೆಯುತ್ತವೆ. ಜಗತ್ತಿನ ಅತಿ ಶ್ರೀಮಂತ ಕ್ರೀಡೆಯೆನಿಸಿದೆ. ಮಿಲಿಯನ್ ಗಟ್ಟಲೆ ಬಹುಮಾನ ಮೊತ್ತವಿಡಲಾಗುತ್ತದೆ. ಇಲ್ಲಿಯ ಒಂದು ಅಂತಹ ಸ್ಪರ್ಧೆಯ ೪೦೦ ಸುತ್ತುಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಒಂಟೆಗಳು ಪಾಲ್ಗೊಳ್ಳುತ್ತವೆ.
ಸೌದಿ ರಾಜಧಾನಿ ರಿಯಾದ್ ನಲ್ಲಿ ನವೆಂಬರ್ ದಿಂದ ಮಾರ್ಚ್ ತನಕ ಪ್ರತಿ ಶುಕ್ರ-ಶನಿವಾರ ಮಧ್ಯಸಹ್ನ ೨ ರಿಂದ ‌೬ ಗಂಟೆವರೆಗೆ ಕುದುರೆ ರೇಸ್ ಸಹ ನಡೆಯುತ್ತದೆ. ದಹನಾ ಮರುಭೂಮಿಯಲ್ಲಿ ಫೆಬ್ರುವರಿ ಯಲ್ಲಿ‌ನಡೆಯುವ ಒಂಟೆಗಳ ಸಂದರ್ಯ ಸ್ಪರ್ಧೆಯಲ್ಲಿ ೩೦ ಸಾವಿರದಷ್ಟು ಒಂಟೆಗಳು ಪಾಲ್ಗೊಳ್ಳುತ್ತವೆ. ಸೌದಿಯ ಬಹಳ ಜನಪ್ರಿಯ ಜನಾದ್ರಿಯಾ ಉತ್ಸವವೂ ಒಂಟೆಗಳ ಓಟದೊಂದಿಗೇ ಪ್ರಾರಂಭವಾಗುತ್ತದೆ. ಪ್ರವಾಸಿಗರಿಗೂ ಒಂಟೆ ಸವಾರಿಯ ಆನಂದ ದೊರಕುತ್ತದೆ. ತೈಫ್ ಎಂಬಲ್ಲಿ ಅಗಸ್ಟ್ ನಲ್ಲಿ ಕ್ರೌನ್ ಪ್ರಿನ್ಸ್ ಕ್ಯಾಮೆಲ್ ಫೇಸ್ಟಿವಲ್ ನಡೆಯುತ್ತದೆ.
ಸ್ಪರ್ಧೆಗೆ ಎಲ್ಲ ಒಂಟೆಗಳನ್ನೂ ಬಳಸುವುದಿಲ್ಲ. ಅವಕ್ಕೇ ವಿಶಿಷ್ಟವಾದ ಕೆಲ ಲಕ್ಷಣಗಳಿರುತ್ತವೆ. ಉತ್ತಮ ರೇಸಿಂಗ್ ಒಂಟೆ ಕಡಿಮೆ ತೂಕದ್ದು, ದೊಡ್ಡ ಎದೆ, ಉದ್ದ ಕಾಲು – ಬಾಲಗಳಿಂದ ಕೂಡಿರುತ್ತದೆ. ಅವಕ್ಕೆ ತರಬೇತಿಯನ್ನೂ ನೀಡಲಾಗುತ್ತದೆ ಮತ್ತು ಖರ್ಜುರ, ಜೇನುತುಪ್ಪ, ಹಾಲು, ಒಣ ಹುಲ್ಲು, ಜೋಳದ ಪೌಷ್ಟಿಕ ಆಹಾರ ಒದಗಿಸಲಾಗುತ್ತದೆ.
‌ ಅರಬ್ ನಾಡಿನಲ್ಲಿ ಒಂಟೆಗಳ ಕುಸ್ತಿಯೂ ನಡೆಯುತ್ತದೆ. ಅದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಎರಡು ಗಂಡು ಟುಲು ಒಂಟೆಗಳು ಈ ಕುಸ್ತಿಯಲ್ಲಿ ಕಾದಾಡುತ್ತವೆ.
ಕರಾಳ ಮುಖ
ಒಂಟೆ ರೇಸಿಗೆ ಇನ್ನೊಂದು ಕರಾಳ ಮುಖವೂ ಇದೆ. ಒಂಟೆಗಳಿಗೆ ಚಿಕ್ಕ ಮಕ್ಕಳನ್ನು ಜಾಕಿಗಳನ್ನಾಗಿ ಬಳಸುವುದುಂಟು. ಸಾಮಾನ್ಯವಾಗಿ ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾ, ಇರಾನ್, ಸುಡಾನ್ ಮೊದಲಾದೆಡೆಗಳಿಂದ ಸಾವಿರಾರು ಮಕ್ಕಳನ್ನು ಖರೀದಿಸಿ ಕಳ್ಳಸಾಗಾಟ ಮಾಡಲಾಗುತ್ತದೆ. ಈ ಮಕ್ಕಳಿಗೆ ತರಬೆತಿ ನೀಡಲಾಗುತ್ತದೆ. ಚಿಕ್ಕ ಮಕ್ಕಳು ಬಿದ್ದು ಗಾಯಗೊಂಡ ಅಥವಾ ಸತ್ತ ಸಾಕಷ್ಟು ಘಟನೆಗಳು ನಡೆಯುತ್ತವೆ. ಜಾಗತಿಕವಾಗಿ ಇದಕ್ಕೆ ವಿರೋಧ ವ್ಯಕ್ತವಾದ ನಂತರ ಕೆಲವೆಡೆ ಇದಕ್ಕೆ ನಿಷೇಧವನ್ನೂ ಜಾರಿಗೊಳಿಸಲಾಗಿದೆ. ಮಕ್ಕಳನ್ನು ಬಳಸಿದರೆ ದಂಡ ವಿಧಿಸಲಾಗುತ್ತದೆ. ಆದರೆ ಅದಿನ್ನೂ ಪೂರ್ತಿ ನಿಂತಿಲ್ಲ. ಈಚೆಗೆ ಜಾಕಿ ರೋಬೋಟ್ ಗಳನ್ನೂ ಬಳಸುವ ಪದ್ಧತಿ ಬಂದಿದೆಯೆನ್ನಲಾಗಿದೆ.
ಇಂದು ಒಂಟೆಗಳ ರೇಸ್ ಅಂತಾರಾಷ್ಟ್ರೀಯ ಕ್ರೀಡೆಯಾಗಿ ಬೆಳೆದಿದೆ. ಶ್ರೀಮಂತ ತೈಲ ದೊರೆಗಳಿಗೆ ಇದು ಪ್ರಮುಖ ಮನೋರಂಜನೆಯ ಆಟವಾಗಿದೆ ಮತ್ತು ಬಹಳ ದೊಡ್ಡ ಪ್ರವಾಸೀ ಆಕರ್ಷಣೆಯೂ ಆಗಿದೆ.

 

ಎಲ್.ಎಸ್.ಶಾಸ್ತ್ರಿ, ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ