ಪ್ರತೀ ವರ್ಷ ಆಷಾಢ ಮಾಸದ ಹುಣ್ಣಿಮೆಯನ್ನು ‘ಗುರು ಪೂರ್ಣಿಮೆ’ ಎಂದು ಆಚರಿಸಲಾಗುತ್ತದೆ. ಈ ದಿನ ಗುರುವಿನ ಪ್ರಭಾವ ಅಧಿಕ ಎಂದೂ ನಂಬಲಾಗಿದೆ.

‘ಗುರು’ ಎನ್ನುವ ಸಂಸ್ಕೃತ ಪದವು ‘ಗು’ ಎಂದರೆ ಅಂಧಕಾರ ಮತ್ತು ‘ರು’ ಎಂದರೆ ದೂರ ಮಾಡುವ ಎನ್ನುವ ಮೂಲ ಪದಗಳಿಂದ ಹುಟ್ಟಿಕೊಂಡಿದ್ದು ಅಂಧಕಾರ ಅಥವಾ ಅಜ್ಞಾನ ದೂರ ಮಾಡುವವರು ಎನ್ನುವ ಅರ್ಥವಿದೆ.

ಶಿವನು ಸಪ್ತ ಋಷಿಗಳಿಗೆ ಯೋಗ ವಿದ್ಯೆ ಧಾರೆ ಎರೆದು ಪ್ರಥಮ ಗುರು ಎನಿಸಿದರೆ, ಮಹರ್ಷಿಗಳಲ್ಲಿ ಓರ್ವರಾದ ವೇದವ್ಯಾಸರು ಓರ್ವ ಮಹಾನ್ ಗುರುವಾಗಿದ್ದು ಅವರ ಹುಟ್ಟಿದ ದಿನ ಇದಾಗಿದೆ ಎಂದು ನಂಬಲಾಗಿದೆ. ಜ್ಞಾನ ವಾಹಿನಿಯಾಗಿರುವ ಗುರು ಮತ್ತು ಗುರು ಪರಂಪರೆಯನ್ನು ಗೌರವಿಸಿ, ಶೃದ್ಧೆ ಮತ್ತು ಭಕ್ತಿ ಯಿಂದ ಆಚರಿಸುವ ದಿನ ಇದಾಗಿದೆ.

ಪ್ರತಿಯೊಬ್ಬರಿಗೂ ತಂದೆ ತಾಯಿಯ ಬಳಿಕ ಗುರು ಅಗ್ರ ಸ್ಥಾನದಲ್ಲಿ ಬರುತ್ತಾರೆ. ಸಮಚಿತ್ತ, ಸಮಭಾವದಿಂದ ಸಮಗ್ರ ಜ್ಞಾನವನನ್ನು ಧಾರೆ ಎರೆಯುವ ಗುರುವೇ ಎಲ್ಲರಿಗೂ ಮಾನ್ಯರು. ಅನಾದಿ ಕಾಲದಿಂದಲೂ ಸಮಗ್ರ ಜೀವನ ಮೌಲ್ಯ ಮತ್ತು ಕೌಶಲ್ಯಗಳನ್ನು ಅಧ್ಯಯನ ಮಾಡಿ ಅನುಸರಿಸಲು ಗುರು-ಶಿಷ್ಯರು ಪ್ರಕೃತಿಯ ರಮಣೀಯ ಸ್ಥಳಗಳಲ್ಲಿ ಪರ್ಣ ಕುಟೀರಗಳನ್ನು ರಚಿಸಿ, ಅಲ್ಲಿಯೇ ನೆಲೆ ನಿಂತು ಶಿಕ್ಷಣ ನೀಡುವ ಗುರುಕುಲ ಪದ್ಧತಿ ಶ್ರೇಷ್ಠ ಶಿಕ್ಷಣ ಪದ್ಧತಿಯಾಗಿರುತ್ತದೆ. ಇಲ್ಲಿ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎಂದು ಗುರುವಿಗೆ ದೇವರ ಸ್ಥಾನ ನೀಡಲಾಗಿದೆ.

ಆಧುನಿಕ ಕಾಲದಲ್ಲಿ ಶಿಕ್ಷಣದ ಸ್ವರೂಪ ಬದಲಾದರೂ ಗುರುವಿನ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತಿತರ ವೈವಿಧ್ಯಮಯ ಕ್ಷೇತ್ರಗಳಲ್ಲಿ ಪಳಗಿದ ಶಿಕ್ಷಕರು ಹಗಲಿರುಳು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

ಗುರು ಬರೀ ಜ್ಞಾನದ ಗಣಿಯಾಗಿರದೆ ದುರ್ವ್ಯಸನ, ದುರ್ನಡತೆಗಳಿಂದ ದೂರವಿದ್ದು ಆದರ್ಶ ವ್ಯಕ್ತಿಯಾಗಿ ಎಲ್ಲರ ಪ್ರೀತಿ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾದರೆ ಸಮಾಜದಲ್ಲಿ ಅಗ್ರಸ್ಥಾನ ಸ್ಥಾನ ದೊರೆತು ಸಮಾಜದ ಸ್ವಾಸ್ಥ್ಯ ಹದಗೆಡುವುದಿಲ್ಲ.

✒️ಜಯರಾಮ ಶೆಟ್ಟಿ ಸಿ, ನಿವೃತ್ತ ಉಪನ್ಯಾಸಕರು, ಸವಿ ತೊನ್ನಾಸೆ.