ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಗುರುವಾರ (ಮಾರ್ಚ್ 14) ಜ್ಞಾನೇಶಕುಮಾರ ಮತ್ತು ಸುಖಬೀರ್ ಸಿಂಗ್‌ ಸಂಧು ಅವರನ್ನು ಭಾರತದ ಚುನಾವಣಾ ಆಯೋಗದ ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಮಿತಿಯ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗೃಹ ಸಚಿವಾಲಯದ ಕಾಶ್ಮೀರ ವಿಭಾಗದ ಮಾಜಿ ಮುಖ್ಯಸ್ಥರಾಗಿ, ಕೇರಳ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಜ್ಞಾನೇಶಕುಮಾರ ಅವರು ಆರ್ಟಿಕಲ್ 370 ರದ್ದತಿಯ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಬ್ಬರು ಹೊಸ ಚುನಾವಣಾ ಆಯುಕ್ತರ ನೇಮಕದ ಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸಹ ಉಪಸ್ಥಿತರಿದ್ದರು.
ಮಾರ್ಚ್ 8 ರಂದು ಅರುಣ ಗೋಯೆಲ್ ಅವರ ರಾಜೀನಾಮೆ ನೀಡಿದ್ದರು ಮತ್ತು ಫೆಬ್ರವರಿ 14 ರಂದು ಅನುಪ ಚಂದ್ರ ಪಾಂಡೆ ಅವರ ನಿವೃತ್ತಿಯಿಂದ ಮತ್ತೊಂದು ಸ್ಥಾನ ತೆರವಾಗಿತ್ತು. ಹೀಗಾಗಿ ಮೂವರು ಸದಸ್ಯರ ಚುನಾವಣಾ ಚುನಾವಣಾ ಪ್ರಾಧಿಕಾರದ ಏಕೈಕ ಸದಸ್ಯರಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ಮಾತ್ರ ಉಳಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯಲ್ಲಿ ಕೇಂದ್ರ ಸಚಿವರು ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ ರಂಜನ್ ಚೌಧರಿ ಇದ್ದಾರೆ.

ಸುಖ್ಬೀರ್‌ ಸಿಂಗ್‌ ಸಂಧು ಮತ್ತು ಜ್ಞಾನೇಶ್‌ ಕುಮಾರ್‌ ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಚುನಾವಣಾ ಆಯುಕ್ತರ ಆಯ್ಕೆ ಸಮಿತಿ ಸದಸ್ಯರೂ ಆಗಿರುವ ಕಾಂಗ್ರೆಸ್‌ ಮುಖಂಡ ಅಧೀರ್ ರಂಜನ್ ಚೌಧರಿ ಗುರುವಾರ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಿತಿಯ ಸದಸ್ಯರ ಒಮ್ಮತದ ಮೇರೆಗೆ ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ಸಮಿತಿ ಮುಂದೆ ಒಟ್ಟು ಆರು ಹೆಸರುಗಳು ಬಂದಿದ್ದವು. ಅವರಲ್ಲಿ ಸಂಧು ಮತ್ತು ಕುಮಾರ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದರು.

ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಇರಬೇಕಿತ್ತು. ಆದರೆ, ಕಾನೂನು ಸಚಿವರ ನೇತೃತ್ವದ ಈ ಸಮಿತಿಯ ಎದುರು ಇತ್ತು ಎನ್ನಲಾದ 200ಕ್ಕೂ ಅಧಿಕ ಅಭ್ಯರ್ಥಿಗಳ ಪಟ್ಟಿಯಲ್ಲಿ 6 ಜನರ ಹೆಸರುಗಳು ಅಂತಿಮ ಆಯ್ಕೆ ಸುತ್ತಿಗೆ ಹೇಗೆ ಬಂದವು ಎನ್ನುವುದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಚೌಧರಿ ಹೇಳಿದ್ದಾರೆ.

ಈ ಮೊದಲಿದ್ದ ಅನೂಪ್‌ ಚಂದ್ರ ಪಾಂಡೆ ಅವರ ಅವಧಿ ಫೆ.14ರಂದು ಮುಕ್ತಾಯಗೊಂಡಿದೆ. ಜತೆಗೆ ಅರುಣ್‌ ಗೋಯೆಲ್‌ ಅವರು ದಿಢೀರ್‌ ರಾಜೀನಾಮೆ ನೀಡಿದ್ದ ಕಾರಣ ಚುನಾವಣಾ ಆಯುಕ್ತರ ಎರಡೂ ಹುದ್ದೆಗಳು ಖಾಲಿಯಾಗಿದ್ದವು.