ಉಡುಪಿ : ಮಳೆಯ ಹಿನ್ನೆಲೆಯಲ್ಲಿ ಬೈಂದೂರು ತಾಲೂಕಿನ 19 ಶಾಲೆಗಳಿಗೆ ಸೋಮವಾರ (ಜುಲೈ 8ರಂದು) ರಜೆ ಘೋಷಣೆ ಮಾಡಲಾಗಿದೆ ಎಂದು ಡಿಡಿಪಿಐ ಕೆ.ಗಣಪತಿ ತಿಳಿಸಿದ್ದಾರೆ.ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಬಂದು ಹೋಗಲು ಕಷ್ಟವಾಗುವ ಕಡೆಗಳಲ್ಲಿ ರಜೆ ಘೋಷಣೆಗೆ ಸೂಚನೆ ನೀಡಿದ್ದೇವೆ. ಹಾಯ್, ಶಾಲಾ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಪಾಲಕರು ಮತ್ತು ಪೋಷಕರಿಗೆ ಸೂಚನೆ ನೀಡುವುದು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ದೇಶನ ನೀಡಲಾಗಿದೆ. ಎಲ್ಲ ಮುಖ್ಯ ಶಿಕ್ಷಕರು ತಮ್ಮ ಶಾಲೆಗೆ ಸಂಬಂಧಿಸಿದಂತೆ ಮಳೆ, ನೆರೆ, ಕಾಲು ಸಂಕ ಮುಂತಾದವುಗಳನ್ನು ಗಮನಿಸಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅಗತ್ಯವೆಂದು ಕಂಡುಬಂದಲ್ಲಿ ಶಾಲೆಗೆ ರಜೆ ನೀಡಬೇಕು. ಈ ಬಗ್ಗೆ ಶಿಕ್ಷಣ ಸಂಯೋಜಕರಿಗೆ ಹಾಗೂ ಸಿ ಆರ್ ಪಿ ಅವರಿಗೆ ಮಾಹಿತಿ ನೀಡಬೇಕು. ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮುಖ್ಯ ಶಿಕ್ಷಕರಾಗಿದ್ದು ವಿವೇಚನೆಯಿಂದ ಕರ್ತವ್ಯ ನಿರ್ವಹಿಸಬೇಕು. ರಜೆಯ ಅಗತ್ಯವಿಲ್ಲದಿದ್ದಲ್ಲಿ ಮಳೆಯಿಂದ ಶಾಲೆಗೆ ಬರಲು ಅನಾನುಕೂಲವಾಗುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಪೋಷಕರಿಗೆ ತಿಳಿಸುವುದು, ಎಲ್ಲ ಅನುದಾನಿತ, ಸರಕಾರಿ ಹಾಗೂ ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸುವಂತೆ ಸೂಚನೆ ನೀಡಲಾಗಿದೆ.