ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಮುಂದಿನ ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಜುಲೈ 8, ಜುಲೈ 10 ಮತ್ತು 11ರಂದು ಆರೆಂಜ್ ಅಲರ್ಟ್ ಹಾಗೂ ಜುಲೈ 9ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಆರೆಂಜ್, ಜುಲೈ 9 ಮತ್ತು ಜುಲೈ 10ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿಗೆ ಇಂದು, ಜುಲೈ 9 ಮತ್ತು ಜುಲೈ 10ರಂದು, ಬೀದರ್, ಕಲಬುರಗಿ ಜಿಲ್ಲೆಗಳಿಗೆ ಇಂದು, ಜುಲೈ 9 ಹಾಗೂ ಯಾದಗಿರಿ ಜಿಲ್ಲೆಗೆ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಕಲಬುರ್ಗಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ಬೀಸುವ ಗಾಳಿಯೊಂದಿಗೆ ಭಾರೀ ಮಳೆ ಆಗುವ ಸಾಧ್ಯತೆಗಳಿವೆ. ಜೋರಾದ ಗಾಳಿಯು ಗಂಟೆಗೆ 35 ರಿಂದ 45 ಕಿಮೀ ವೇಗದಲ್ಲಿ ಬೀಸಲಿದೆ. ದಕ್ಷಿಣ ಕನ್ನಡ ಕರಾವಳಿಯಲ್ಲಿ ಮುಲ್ಕಿಯಿಂದ ಮಂಗಳೂರಿನವರಗೆ, ಉಡುಪಿಯ ಬೈಂದೂರಿನ ಕಾಪುವರೆಗೆ, ಉತ್ತರ ಕನ್ನಡ ಕರಾವಳಿಯಲ್ಲಿ ಮಾಜಾಳಿಯಿಂದ ಭಟ್ಕಳದವರೆಗೆ ಭಾರೀ ಅಲೆಗಳ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉಳಿದಂತೆ ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಗಾಳಿ ಮಳೆಯಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ನಿರಂತರ ಗಾಳಿ ಮತ್ತು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಎಲ್ಲೆಲ್ಲಿ, ಎಷ್ಟು ಮಳೆ ಆಗಿದೆ…
ನಿನ್ನೆಯಿಂದ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ನಲ್ಲಿ ಅತಿ ಹೆಚ್ಚು 21 ಸೆಂ.ಮೀ.ಮಳೆ ದಾಖಲಾಗಿದೆ. ಇದನ್ನು ಹೊರತುಪಡಿಸಿದರೆ ಮಂಕಿ, ಕೊಟ್ಟಿಗೆಹಾರ, ಲೋಂಡಾದಲ್ಲಿ ತಲಾ 11 ಸೆಂ.ಮೀ., ಕುಮಟಾ, ಕದ್ರಾ, ಶಿರಾಲಿಯಲ್ಲಿ ತಲಾ 8 ಸೆಂ.ಮೀ., ಕೊಲ್ಲೂರು, ಗೋಕರ್ಣ, ಸೇಡಂ, ಆಗುಂಬೆಯಲ್ಲಿ ತಲಾ 7 ಸೆಂ.ಮೀ., ಕಾರವಾರ, ಕೋಟ, ಉಡುಪಿ, ಅಂಕೋಲಾ, ಕುಂದಾಪುರ, ಜಗಲ್‌ಬೆಟಟ್, ಧರ್ಮಸ್ಥಳ, ಸುಲೇಪೇಟೆ, ಚಿತ್ತಾಪುರ, ಚಿಂಚೋಳಿ, ಕಳಸ, ಮೂಲ್ಕಿಯಲ್ಲಿ ತಲಾ 5 ಸೆಂ.ಮೀ., ಕಲಬುರಗಿ, ಫರಹತಾಬಾದ್, ಮಂಗಳೂರು, ಉಪ್ಪಿನಂಗಡಿ, ಸಿದ್ದಾಪುರ, ಕಾರ್ಕಳ, ಮಾಣಿ, ಯಲ್ಲಾಪುರ, ಶೃಂಗೇರಿ, ಅಡಗಿ, ಜಯಪುರ, ಲಿಂಗನಮಕ್ಕಿ, ಕೊಡಗಿನಲ್ಲಿ ತಲಾ 3 ಸೆಂ.ಮೀ., ಭಾಗಮಂಡಲ, ಬನವಾಸಿ, ಸುಳ್ಯ, ಪಣಂಬೂರು, ಮಂಗಳೂರು, ಕಮಲಾಪುರದಲ್ಲಿ ತಲಾ 2 ಸೆಂ.ಮೀ.ಮಳೆ ಆಗಿದೆ.