ಬೆಳಗಾವಿ :
ಹಿಂಡಾಲ್ಕೋ ಇಂಡಸ್ಟ್ರೀಸ್ ಲಿಮಿಟೆಡ್ ಬೆಳಗಾವಿ ಕಂಪನಿಯ ಪ್ರಾಯೋಜಕತ್ವದಲ್ಲಿ ಕಂಪನಿಯ ಕಾರ್ಮಿಕರಿಗಾಗಿ ಒಂದು ವಾರಗಳವರೆಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಅದ್ದೂರಿಯಾಗಿ ನಡೆಯಿತು.

17/12/2023 ರಂದು ಹಿಂಡಾಲ್ಕೋ ಕಂಪನಿಯ ಮೈದಾನದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಹಾಗೂ ಕಂಪನಿಯ ಮುಖ್ಯ ನಿರ್ವಾಹಕ ಅಭಿಜಿತ್ ಬಂಡಿ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಮಯೂರ್ ಕೃಷ್ಣ ಅವರ ಪ್ರೇರಣೆಯೊಂದಿಗೆ ವಿಧ್ಯುಕ್ತವಾಗಿ ಚಾಲನೆ ಪಡೆದುಕೊಂಡಿತು.
ಮೈದಾನದ ಸುತ್ತಲೂ ಕಿಕ್ಕಿರಿದು ಸೇರಿದ ಜನಸಾಗರದ ಚೀತ್ಕಾರಗಳ ನಡುವೆ ಕಂಪನಿಯ ಎಲ್ಲಾ ಕಾರ್ಮಿಕರು ಕಟ್ಟಿಕೊಂಡ ಬೇರೆ ಬೇರೆ ತಂಡಗಳು ತಮ್ಮ ಅತ್ಯುತ್ತಮ ಕ್ರೀಡಾ ಕೌಶಲ್ಯ ಪ್ರದರ್ಶಿಸಿದರು.

ಕಂಪನಿಯ ಕಡೆಯಿಂದ ಪಂದ್ಯಾಟದಲ್ಲಿ ಮೂಡಿಬರುವ ಪ್ರತಿ ಸಿಕ್ಸ್, ಫೋರ್ ಮತ್ತು ಐವತ್ತು, ನೂರು ರನ್ನುಗಳು, ಪ್ರತಿ ಪಂದ್ಯದಲ್ಲಿ ಮೂರು ವಿಕೆಟ್ ಇತ್ಯಾದಿಗಳಿಗೆ ನಿರ್ಧರಿತ ಹಣವನ್ನು ಸಾಮಾಜಿಕ ಕಾರ್ಯಕ್ಕೆ ವಿಶೇಷವಾಗಿ ಮೀಸಲಿಡಲಾಗಿತ್ತು. ಆ ಹಣವನ್ನು ಬೆಳಗಾವಿ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳಿಗೆ, ಹೆಚ್ ಐ ವಿ ಮಕ್ಕಳ ಕಲ್ಯಾಣಕ್ಕೆ, ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ, ಅಂಧ ಮಕ್ಕಳ ಕಲ್ಯಾಣಕ್ಕೆ, ವೃದ್ಧಾಶ್ರಮ ನಿರ್ವಹಣೆಗೆ ಹಾಗೂ ಕ್ಯಾನ್ಸರ್ ಆಸ್ಪತ್ರೆಗೆ ಕೊಡುವ ನಿರ್ಧಾರ ಕಂಪನಿಯ ಕಾರ್ಮಿಕರು ಮತ್ತು ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಸುಮಾರು 1,70,000 ರೂಪಾಯಿಗಳಲ್ಲಿ ಜಿಲ್ಲೆಯ 7 ವಿವಿಧ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ 25,000/- ಗಳು ಪ್ರತಿ ಸಂಸ್ಥೆಗೆ ಕೊಡಲಾಗುವುದು ಎಂದು ಪಂದ್ಯಾಟದ ಕೋರ್ ಕಮೀಟಿಯ ಮತ್ತು ಕಂಪನಿಯ ಮಾನವ ಸಂಪನ್ಮೂಲ ಮುಖ್ಯಸ್ಥ ಮಯೂರ್ ಕೃಷ್ಣ ಮಾಧ್ಯಮಗಳಿಗೆ ತಿಳಿಸಿದರು.
7 ಸಂಸ್ಥೆಗಳಾದ, ಡಾಟರ್ಸ ಆಫ್ ಆಶ್ರಯ ಫೌಂಡೇಶನ್, ನಂದನ ಮಕ್ಕಳ ಧಾಮ, ಕ್ಯಾನ್ಸರ್ ಹಾಸ್ಪಿಟಲ್ ಬೆಳಗಾವಿ, ಸ್ಪಂದನ ನೆಟ್ವರ್ಕ್ ಆಫ್ ಪಾಸಿಟಿವ್ ಪೀಪಲ್, ಸಮೃದ್ಧ ಫೌಂಡೇಶನ್ ಫಾರ್ ಡಿಸೇಬಲ್ಸ್, ಸ್ಟುಡೆಂಟ್ಸ್ ಗವರ್ನ್‌ಮೆಂಟ್ ಸ್ಕೂಲ್, ಶಾಂತಾಯಿ ವೃದ್ಧಾಶ್ರಮ ಈ ಸಾಮಾಜಿಕ ಕಳಕಳಿಯ ಕ್ರಿಕೆಟ್ ಪಂದ್ಯಾಟದಲ್ಲಿ ಪೂರ್ಣ ಪ್ರಮಾಣದಲ್ಲಿ ಜೊತೆಯಾಗಿದ್ದವು. ಈ ಎಲ್ಲಾ ಸಂಘಟನೆಗಳಿಗೆ ನೆರವಾಗುವ ಮಹತ್ತರ ಜವಾಬ್ದಾರಿಯೊಂದಿಗೆ ಪೂರ್ತಿ ಕ್ರಿಕೆಟ್ ಪಂದ್ಯಾಟ ವಿಶೇಷವಾಗಿ ಮೂಡಿಬಂದಿತ್ತು.

24/12/2023 ರ ಸಂಜೆ ಪ್ರೊಡಕ್ಷನ್ ವಾರಿಯರ್ಸ್‌ ಮತ್ತು ಇಂಜಿನಿಯರಿಂಗ್ ಬುಲ್ಸ್ ನಡುವೆ ನಡೆದ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿ ವೀಕ್ಷಕರ ಮನ ರಂಜಿಸಿತು. ಪ್ರತಿ ಸಿಕ್ಸ್ ಮತ್ತು ಫೋರ್ ಸಿಡಿದಾದ ಸಿಡಿಮದ್ದು ಸಿಡಿಸುವ ಮೂಲಕ ಅತ್ಯಂತ ಅದ್ದೂರಿಯಾಗಿ ಫೈನಲ್ ಪಂದ್ಯ ಜರುಗಿತು.