ಬೆಂಗಳೂರು:
ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಪ್ರಮುಖ ಹುದ್ದೆಗಳಿಗೆ ನೇಮಕಾತಿ ನಡೆದಿದೆ.
ಮೇಲ್ಮನೆ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನೇಮಿಸಲಾಗಿದೆ. ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರಿಗೆ ವಿಧಾನ ಸಭಾ ಉಪ ನಾಯಕ ಸ್ಥಾನ ನೀಡಲಾಗಿದೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಈ ನಿಯುಕ್ತಿ ಪ್ರಕಟಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಬಿ.ವೈ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು ಮತ್ತು ಕೆಲವು ಮೋರ್ಚಾಗಳಿಗೆ ನೇಮಕಾತಿಯನ್ನು ಪ್ರಕಟಿಸಿದ್ದರು. ಇದೀಗ ಎರಡನೇ ಹಂತದಲ್ಲಿ ವಿಧಾನ ಸಭೆ ಮತ್ತು ಪರಿಷತ್‌ನ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ: ಮೇಲ್ಮನೆ ವಿಪಕ್ಷ ನಾಯಕ
ಸುನೀಲ್ ವಲ್ಯಾಪುರೆ : ಪರಿಷತ್ ಉಪ ನಾಯಕ
ಅರವಿಂದ್ ಬೆಲ್ಲದ: ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ
ಎನ್‌. ರವಿಕುಮಾರ್ ಕುಮಾರ್ : ವಿಧಾನ ಪರಿಷತ್ ಮುಖ್ಯ ಸಚೇತಕ
ದೊಡ್ಡನಗೌಡ ಪಾಟೀಲ: ವಿಧಾನಸಭೆ ಮುಖ್ಯ ಸಚೇತಕ
.

ಆರ್‌. ಅಶೋಕ್‌ ಅವರನ್ನು ವಿಧಾನಭೆಯ ವಿಪಕ್ಷ ನಾಯಕರಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ವಿಪಕ್ಷ ನಾಯಕನ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಕೊಡಬೇಕು ಎಂಬ ಬೇಡಿಕೆ ಇತ್ತು. ಆದರೆ, ಕಳೆದ ಬಾರಿ ವಿಧಾನ ಪರಿಷತ್‌ ವಿಪಕ್ಷ ಸ್ಥಾನವನ್ನು ಚೆನ್ನಾಗಿ ನಿಭಾಯಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರಿಗೇ ಪಕ್ಷ ಮಣೆ ಹಾಕಿದೆ. ಉತ್ತರ ಕರ್ನಾಟಕ ಭಾಗದಿಂದ ವಿಪಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದ ರಘುನಾಥ್ ಮಲ್ಕಾಪುರೆ ಅವರಿಗೆ ಉಪ ನಾಯಕನ ಸ್ಥಾನ ನೀಡಲಾಗಿದೆ.

ಅರವಿಂದ ಬೆಲ್ಲದ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ರಾಜ್ಯಾಧ್ಯಕ್ಷ ಸ್ಥಾನ ತಪ್ಪಿದಕ್ಕೆ ವರಿಷ್ಠರ ವಿರುದ್ಧ ಬೇಸರಗೊಂಡಿದ್ದ ಅರವಿಂದ ಬೆಲ್ಲದ ಅವರನ್ನು ಈಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಸ್ಥಾನ ನೀಡಲಾಗಿದೆ. ಈ ಮೂಲಕ ಅರವಿಂದ ಬೆಲ್ಲದ ಅವರನ್ನು ಸಮಾಧಾನ ಮಾಡುವ ಮತ್ತು ಉತ್ತರ ಕರ್ನಾಟಕಕ್ಕೆ ನ್ಯಾಯ ನೀಡುವ ಪ್ರಯತ್ನ ಮಾಡಲಾಗಿದೆ.