ಬೆಳಗಾವಿ :
ಬೆಳಗಾವಿಯ ಸ್ಥಾನಿಕರಿಗೆ ಈ ಸಲ ಬಿಜೆಪಿ ಟಿಕೆಟ್ ನೀಡಿಲ್ಲ. ಇದು ಟಿಕೆಟ್ ಆಕಾಂಕ್ಷಿಗಳಿಗೆ ತೀವ್ರ ನಿರಾಶೆಗೆ ಕಾರಣವಾಗಿದೆ. ಹೀಗಾಗಿ ಮಹತ್ವದ ಸಭೆ ಕರೆಯುತ್ತಿದ್ದೇನೆ.

ಹೀಗೆಂದು ಆಕ್ರೋಶ ವ್ಯಕ್ತಪಡಿಸಿದವರು
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬೆಳಗಾವಿಯಿಂದ ಸ್ಪರ್ಧೆಗೆ ಅವಕಾಶ ನೀಡದ ಕಾರಣ ಪಕ್ಷದ ಕಟ್ಟಾ ಕಾರ್ಯಕರ್ತ ಮಹಾಂತೇಶ ವಕ್ಕುಂದ ಬಂಡಾಯದ ಕಹಳೆಯೂದಿದ್ದಾರೆ.

ಲೋಕಸಭಾ ಚುನಾವಣೆಗೆ ಈ ಬಾರಿ ಬೆಳಗಾವಿಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಭರವಸೆ ವ್ಯಕ್ತವಾಗಿತ್ತು. ಬಿಜೆಪಿಯನ್ನು ಕಟ್ಟಲು ಹಗಲಿರುಳು ಶ್ರಮಿಸಿದ ನಾಯಕರನ್ನು ಬಿಟ್ಟು ಹೊರಗಿನ ನಾಯಕರನ್ನು ತಂದು ಚುನಾವಣೆಗೆ ನಿಲ್ಲಿಸಿರುವುದು ಅತ್ಯಂತ ಖೇದಕರ. ಇದರಿಂದಾಗಿ ಈ ಬಾರಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿರುವುದಾಗಿ ಮಹಾಂತೇಶ ವಕ್ಕುಂದ ಅವರು ಪತ್ರಿಕಾಗೋಷ್ಠಿಯಲ್ಲಿ ಭಿನ್ನಮತದ ಕಹಳೆಯೂದಿದ್ದಾರೆ.

ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಪಕ್ಷವನ್ನು ತೊರೆದು ದೇಶದ ಪ್ರಧಾನಮಂತ್ರಿಯನ್ನು, ರಾಜ್ಯ ನಾಯಕರನ್ನು, ನಮ್ಮ ಪಕ್ಷದ ಮುಖಂಡರನ್ನು ಅತ್ಯಂತ ಹೀನಾಯವಾಗಿ ನಿಂದಿಸಿದವರನ್ನು ಇದೀಗ ಮತ್ತೆ ಕರೆತಂದು ಚುನಾವಣೆಗೆ ನಿಲ್ಲಿಸುತ್ತಿರುವುದು ಅತ್ಯಂತ ಬೇಸರದ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ ವ್ಯಕ್ತಿ ಇಂದು ಮೋದಿ ಅವರ ಹೆಸರಲ್ಲೇ ಚುನಾವಣೆಗೆ ಇಳಿದು ಮತಯಾಚಿಸುತ್ತಿರುವುದು ಅತ್ಯಂತ ಬೇಸರದ ಸಂಗತಿ. ಚುನಾವಣೆ ಕಣಕ್ಕೆ ಇಳಿಯಲು ಬೆಳಗಾವಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಆದರೆ ಅವರಿಗೆ ಟಿಕೆಟ್ ನೀಡದೆ ಇರುವುದು ಸಮರ್ಥನೀಯವಲ್ಲ. ಹೊರಗಿನವರನ್ನು ಕರೆತಂದು ಟಿಕೆಟ್ ನೀಡಿರುವುದನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಅನೇಕರು ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ನಾನು ಸಹ ಕಣಕ್ಕೆ ಇಳಿಯಲು ಮುಂದಾಗಿದ್ದೆ. ಆದರೆ, ಅಂಥ ಆಕಾಂಕ್ಷಿಗಳಿಗೆ ಇಂದು ನಿರಾಶೆಯಾಗಿದೆ. ಪಕ್ಷ ಇಂದು ನಮ್ಮ ಕೂಗಿಗೆ ಧ್ವನಿಯಾಗಿಲ್ಲ. ಈ ನಿಟ್ಟಿನಲ್ಲಿ ಸ್ಥಾನಿಕರಿಗೆ ಅವಕಾಶ ಸಿಗಬೇಕಾಗಿತ್ತು. ಬೆಳಗಾವಿಯ ಮನೆ ಮಗನಾದ ನಾನು ಪಕ್ಷವನ್ನು ಸಂಘಟನೆ ಮಾಡಿದವನು. ಬೆಳಗಾವಿಯಲ್ಲಿ ಬಿಜೆಪಿಯನ್ನು ಕಟ್ಟಿದವನು. ಈ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ವಿಚಾರವನ್ನು ಹೊಂದಿದ್ದು ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಭಾನುವಾರ ಮಹತ್ವದ ಸಭೆಯನ್ನು ಕರೆದಿದ್ದೇನೆ ಎಂದು ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದರು.