ಬೆಂಗಳೂರು: ನಾನು ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ. ನಾನು ಕಾಂಗ್ರೆಸ್ ಪಕ್ಷದ ಪ್ರತಿನಿಧಿ. ಹೀಗಾಗಿ ಕುಮಾರಸ್ವಾಮಿ ಪ್ರಕರಣದ ಬಗ್ಗೆ ತಿಳಿದುಕೊಂಡು ಅನಂತರ ಈ ಬಗ್ಗೆ ಮಾತನಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಎಸ್ಐಟಿ ರಾಜ್ಯಪಾಲರಿಗೆ ಸಲ್ಲಿಸಿದ್ದು, ಈ ವಿಚಾರದಲ್ಲಿ ರಾಜ್ಯಪಾಲರ ಪ್ರತಿಕ್ರಿಯೆ ಏನಿರಬಹುದು ಎನ್ನುವ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಹೀಗೆ ಉತ್ತರಿಸಿದರು.

ಶೇಷಾದ್ರಿಪುರ ಜಂಕ್ಷನ್ ಬಳಿ ರಾಜೀವ್ ಗಾಂಧಿ ಅವರ ಪ್ರತಿಮೆಗೆ ಮಂಗಳವಾರ ಪುಷ್ಪನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡರಿಂದ ರಾಜ್ಯಪಾಲರ ನಿಂದನೆ ವಿರುದ್ಧ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಜೆಪಿಯವರು ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರನ್ನು ಬಿಜೆಪಿಯವರು ತಮ್ಮ ಏಜೆಂಟರನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇವೆಲ್ಲ ಸಾಕ್ಷಿ” ಎಂದು ತಿರುಗೇಟು ನೀಡಿದರು.

*ಬಿಬಿಎಂಪಿಯಿಂದ ಪ್ರತಿ ವರ್ಷ ರಾಜೀವ್ ಗಾಂಧಿ ಜನ್ಮ ದಿನಾಚರಣೆ*

“ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ ಅವರ ಆಲೋಚನೆಗಳು ಇಂದಿನ ಯುವಪೀಳಿಗೆಗೆ ಸ್ಪೂರ್ತಿ. ಆದ ಕಾರಣ ಪ್ರತಿ ವರ್ಷ ಇವರ ಜನ್ಮದಿನವನ್ನು ಬಿಬಿಎಂಪಿಯಿಂದ ನಡೆಸಬೇಕು ಎಂದು ಆದೇಶ ನೀಡಲಾಗುವುದು” ಎಂದರು.

“ಪಂಚಾಯತ್ ಮಟ್ಟದಿಂದ ಪಾರ್ಲಿಮೆಂಟ್ ವರೆಗೆ ನಾಯಕರು ರಾಜೀವ್ ಗಾಂಧಿ ಅವರನ್ನು ಮರೆಯುವಂತಿಲ್ಲ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ರಾಜೀವ್ ಗಾಂಧಿಯವರ ನೂತನ ಪ್ರತಿಮೆ ನಿರ್ಮಾಣಕ್ಕೆ ಸಹಿ ಹಾಕಿದೆ. ದಿನೇಶ್ ಗುಂಡೂರಾವ್ ಅವರ ಇಚ್ಛೆಯಂತೆ, ಅವರ ಕ್ಷೇತ್ರ ವ್ಯಾಪ್ತಿಯ ಶೇಷಾದ್ರಿಪುರಂ ಸಿಗ್ನಲ್ ಮುಕ್ತ ಜಂಕ್ಷನ್ ಗೆ ರಾಜೀವ್ ಗಾಂಧಿ ಹೆಸರಿಟ್ಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು” ಎಂದರು.

“18 ವರ್ಷಕ್ಕೆ ಮತದಾನದ ಹಕ್ಕು, ಪಂಚಾಯತ್ ರಾಜ್ ತಿದ್ದುಪಡಿ, ಐಟಿ ಬಿಟಿ ಬೆಳವಣಿಗೆಗೂ ಇವರೇ ಕಾರಣ. ಇಂದು ಎಲ್ಲರ ಬಳಿ ಎರಡೆರಡು ಮೊಬೈಲ್ ಗಳಿವೆ. ಇದಕ್ಕೆ ಕಾರಣ ರಾಜೀವ್ ಗಾಂಧಿಯವರ ದೂರದೃಷ್ಟಿಯ ಟೆಲಿಫೋನ್ ಕ್ರಾಂತಿ ಕಾರಣ” ಎಂದು ಹೇಳಿದರು.

“ದೇಶದ ಸಮಗ್ರತೆ ಐಕ್ಯತೆ ಶಾಂತಿಗಾಗಿ ನೆಹರು ಕುಟುಂಬ ದುಡಿದಿದೆ. ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ವಿಚಾರಗಳನ್ನು ನಾವು ಮರೆಯಬಾರದು ” ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರದು ಹೆದರುವ ರಕ್ತವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಕಲಬುರ್ಗಿ:
ಮುಡಾ ಹಗರಣದ ತನಿಖೆಗೆ ಮುಖ್ಯಮಂತ್ರಿಗಳೇ ನ್ಯಾಯಾಂಗ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಿದ್ದಾರೆ. ನಲವತ್ತು ವರ್ಷ ರಾಜಕಾರಣ ಮಾಡಿಕೊಂಡು ಬಂದಿರುವ ಅವರು ಹೆದರುವವರಲ್ಲ, ಅದು ಅವರ ರಕ್ತದಲ್ಲಿಯೇ ಇಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಲಬುರ್ಗಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ತಪ್ಪು ಮಾಡದಿದ್ದರೇ ಸಿಎಂ ಏಕೆ ಹೆದರಬೇಕು ಎನ್ನುವ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಯಾರು ಹೆದರಿದ್ದಾರೆ. ಶೆಟ್ಟರ್ ಅವರಿಗೆ ಹೆದರಿಕೆ ಇರಬೇಕು. ನಾವು ಈ ನೆಲದ ಕಾನೂನಿಗೆ ಗೌರವ ನೀಡುತ್ತೇವೆ. ಸಿಎಂ ಅವರ ತಪ್ಪು ಇಲ್ಲದಿರುವ ಕಾರಣಕ್ಕೆ ಹೈಕೋರ್ಟ್ ಪ್ರಾಸಿಕ್ಯೂಷನ್ ಗೆ ತಡೆ ನೀಡಿದೆ. ಈ ಹಿಂದೆ ರಚನೆ ಮಾಡಿರುವ ಆಯೋಗದಂತೆ ನ್ಯಾಯಾಂಗ ತನಿಖೆ ನಡೆಯಲಿದೆ” ಎಂದು ತಿಳಿಸಿದರು.

ಐದು ವರ್ಷವೂ ಸಿದ್ದರಾಮಯ್ಯ ಐದು ವರ್ಷದ ಅವಧಿ ಪೂರ್ಣಗೊಳಿಸುತ್ತಾರೆಯೇ ಎಂದು ಪ್ರಶ್ನಿಸಿದಾಗ “ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 10 ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತದೆ” ಎಂದರು.

ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ಕೇಳಿದಾಗ “ಅವರನ್ನು ರಾಜ್ಯಪಾಲರ ಹುದ್ದೆಗೆ ಕೂರಿಸಿರುವುದು ಸಂವಿಧಾನವೇ ಹೊರತು ಜಾತಿಯಲ್ಲ” ಎಂದರು.

ರಾಜ್ಯಪಾಲರನ್ನು ನಿಂದಿಸಿದವರ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ಎಸ್ ಇ, ಎಸ್ ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎನ್ನುವ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ “ಕಲಬುರ್ಗಿಯಲ್ಲಿ ನಿರ್ಮಾಣವಾಗಿರುವ ಹೊಸ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬಂದು ಸೇರಿಸಲು ಹೇಳಿ” ಎಂದು ಹೇಳಿದರು.

2011 ರಲ್ಲಿ ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಿಸಲಾಯಿತು ಈಗ ಅದೇ ಸನ್ನಿವೇಶ ಸೃಷ್ಟಿಯಾಗಿದೆ ಎನ್ನುವ ಬಿಜೆಪಿ ಸಾಮಾಜಿಕ ಜಾಲತಾಣದ ಪೋಸ್ಟಿನ ಬಗ್ಗೆ ಕೇಳಿದಾಗ “ಅವರನ್ನು ಜೈಲಿಗೆ ಹಾಕಿಸಿದ್ದು ಕಾಂಗ್ರೆಸ್ ಅಲ್ಲ. ಇದೇ ದೇವೇಗೌಡರು, ಕುಮಾರಸ್ವಾಮಿ ನಾವಲ್ಲ” ಎಂದು ಹೇಳಿದರು.

ಕುಮಾರಸ್ವಾಮಿ ಅವರ ವಿರುದ್ದ ಲೋಕಾಯುಕ್ತ ದೋಷಾರೋಪ ಪಟ್ಟಿ ಸಲ್ಲಿಕೆಗೆ ರಾಜ್ಯಪಾಲರ ಅನುಮತಿ ಕೇಳಿರುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ “ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಸ್ವತಃ ನನ್ನ ಕಣ್ಣಿನಿಂದ ನೋಡಬೇಕು. ಯಾವುದಾದರೂ ದಾಖಲೆ ಇದ್ದರೆ ನೀಡಿ. ನಾನು (ಮಾಧ್ಯಮದವರನ್ನು) ನಿಮ್ಮನ್ನು ಆಶ್ರಯಿಸಲು ಆಗುವುದಿಲ್ಲ” ಎಂದರು.

ಸಿಎಂ ದೆಹಲಿ ಭೇಟಿಯ ಬಗ್ಗೆ ಕೇಳಿದಾಗ “ಹೈಕಮಾಂಡಿಗೆ ವಾಸ್ತವಾಂಶ ತಿಳಿಸಬೇಕು ಎಂದು ಇಬ್ಬರೂ ಮಾತನಾಡಿಕೊಂಡಿದ್ದೆವು. ಅದಕ್ಕೆ ದೆಹಲಿಗೆ ಇಬ್ಬರೂ ತೆರಳೋಣ ಎಂದು ಮಾತುಕತೆ ನಡೆಸಿದ್ದೇವೆ” ಎಂದರು.

ಬಿಜೆಪಿ ಹೊರತಾದ ಪಕ್ಷಗಳು ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪದ ವಿರುದ್ದ ಹೋರಾಟ ರೂಪಿಸಲು ಎಲ್ಲರನ್ನು ಒಗ್ಗೂಡಿಸಲು ದೆಹಲಿಗೆ ಸಿದ್ದರಾಮಯ್ಯ ಬೇಟಿ ನೀಡುತ್ತಿದ್ದಾರೆ ಎಂದಾಗ “ಮಾಧ್ಯಮಗಳಲ್ಲಿಯೇ ಎಲ್ಲವೂ ಬರುತ್ತಿದೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಎಲ್ಲೆಲ್ಲಿ ಏನಾಗುತ್ತಿದೆ ಎಂಬುದು ನೀವು (ಮಾಧ್ಯಮಗಳು) ನೋಡಿದಲ್ಲವೇ?” ಎಂದು ಮರು ಪ್ರಶ್ನಿಸಿದರು.

ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು ಎನ್ನುವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಇಡೀ ಪಕ್ಷ, ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ಅವರು ಎಲ್ಲಾ ನಾಯಕರು ಅವರ ಪರವಾಗಿ ನಿಂತಿದ್ದೇವೆ” ಎಂದರು.

ಪರಮೇಶ್ವರ್ ಅವರು ವಿದೇಶಿ ಪ್ರವಾಸದ ಬಗ್ಗೆ ಕೇಳಿದಾಗ “ನಾನು ಹೋಗುತ್ತಿದ್ದೇನೆ” ಎಂದಾಗ ಯಾವಾಗ ಹೋಗುತ್ತಿದ್ದೀರಿ ಎಂದು ಮರುಪ್ರಶ್ನಿಸಿದಾಗ “ಕೋರ್ಟಿಗೆ ಅರ್ಜಿ ಹಾಕಿದ್ದೇನೆ, ತಿಳಿಸುತ್ತೇನೆ” ಎಂದರು.

ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಎಲ್ಲಿಗೆ ತಲುಪಲಿದೆ ಎಂದು ಪ್ರಶ್ನಿಸಿದಾಗ “ನಮ್ಮ ಮುಖ್ಯಮಂತ್ರಿಗಳು ತಪ್ಪು ಮಾಡಿಲ್ಲ. ಎಲ್ಲಿ ನ್ಯಾಯ ಇದೆಯೋ ಅದಕ್ಕೆ ಜಯ ದೊರಕಲಿದೆ. ಮುಡಾದವರು ಸಿಎಂ ಪತ್ನಿ ಅವರ ಜಮೀನು ಆಕ್ರಮಿಸಿಕೊಂಡರು, ಅದಕ್ಕೆ ಅವರು ಪರಿಹಾರ ಪಡೆದರು. ಪರಿಹಾರ ನೀಡಿ ಎಂದು ಸಿದ್ದರಾಮಯ್ಯ ಅವರು ಪತ್ರ ಬರೆದಿಲ್ಲ ಹಾಗೂ ಇವರ ಕಾಲದಲ್ಲಿ ಇದು ನಡೆದಿಲ್ಲ. ಬಿಜೆಪಿಯವರ ಕಾಲದಲ್ಲಿಯೇ ಸೈಟುಗಳ ಹಂಚಿಕೆಯಾಗಿದೆ” ಎಂದರು.

ಆರ್ಟಿಕಲ್ 371 ಜೆ ಜಾರಿಗೆ ಹತ್ತು ವರ್ಷ; ಸಂಭ್ರಮಾಚರಣೆಗೆ ಸರ್ಕಾರದ ಸಿದ್ದತೆ: ಡಿಸಿಎಂ ಡಿ.ಕೆ.ಶಿವಕುಮಾರ್

ಕಲಬುರ್ಗಿ :
“ಆರ್ಟಿಕಲ್ 371 ಜೆ ಜಾರಿಯಾಗಿ ಹತ್ತು ವರ್ಷಗಳಾಗುತ್ತಿದ್ದು, ಇದರ ಸಂಭ್ರಮಾಚರಣೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಂಭ್ರಮಾಚರಣೆ ನೆನಪಿಗೆ 371 ಹಾಸಿಗೆಗಳನ್ನು ಒಳಗೊಂಡ ಜಯದೇವ ಆಸ್ಪತ್ರೆಯನ್ನು ಮುಂದಿನ ತಿಂಗಳು ಲೋಕಾರ್ಪಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಲಬುರ್ಗಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು “ಕಲಬುರ್ಗಿಗೆ ಅಂತರರಾಷ್ಟೀಯ ಗುಣಮಟ್ಟದ ಇಎಸ್ ಐ ಆಸ್ಪತ್ರೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ತಂದರು. ಕಲಬುರ್ಗಿ ರಾಜ್ಯದಲ್ಲಿ ಮೂರನೇ ಆರೋಗ್ಯ ಹಬ್ ಆಗಿ ರೂಪುಗೊಳ್ಳುತ್ತಿದೆ. ಇಂದಿರಾಗಾಂಧಿ ತಾಯಿ- ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿವೆ. ಇದರಿಂದ ಈ ಭಾಗದ ಜನರು ಬೆಂಗಳೂರು, ಹೈದರಾಬಾದ್ ಗೆ ಹೋಗುವುದು ತಪ್ಪಲಿದೆ. ಸಂಭ್ರಮಾಚರಣೆ ಕಾರ್ಯಕ್ರಮದ ಬಗ್ಗೆ ವಿರೋಧ ಪಕ್ಷದ ಇಬ್ಬರು ನಾಯಕರ ಜೊತೆ ಚರ್ಚೆ ನಡೆಸಿ, ದಿನಾಂಕ ಅಂತಿಮಗೊಳಿಸಲಾಗುವುದು” ಎಂದು ತಿಳಿಸಿದರು.

“ಆರ್ಟಿಕಲ್ 371 ಜೆ ಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ ಮಲ್ಲಿಖಾರ್ಜುನ ಖರ್ಗೆ ಅವರು ಮುಂದಾಳತ್ವವಹಿಸಿ ಜಾರಿಗೆ ತಂದರು. ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದಿದೆ” ಎಂದರು.

*ತುಂಗಭದ್ರಾ ಗೇಟ್ ದುರಸ್ತಿ ಮಾಡಿದ ಪ್ರತಿ ಕಾರ್ಮಿಕರಿಗೂ ಗೌರವ ಸಲ್ಲಿಕೆ*

“70 ವರ್ಷಗಳ ಹಳೆಯ ತುಂಗಭದ್ರಾ ಅಣೆಕಟ್ಟಿನ 19 ನೇ ಗೇಟಿನ ಚೈನ್ ಲಿಂಕ್ ದುರಾದೃಷ್ಟವಶಾತ್ ತುಂಡಾಯಿತು. ಇದಕ್ಕೆ ಬಿಜೆಪಿ, ದಳದವರು ನಮ್ಮ ಮೇಲೆ ಗದಾಪ್ರಹಾರ ಮಾಡಿದರು. ನಾವು ಹಗಲು, ರಾತ್ರಿ ನಿದ್ದೆ ಮಾಡದೆ ಕಾರ್ಯಪ್ರವೃತ್ತರಾದೆವು. ಕೂಡಲೇ ಎಂಜಿನಿಯರ್ ಗಳು, ತಂತ್ರಜ್ಞರನ್ನು ಕರೆಸಿ ಗೇಟನ್ನು ಮತ್ತೆ ಅಳವಡಿಸಲಾಯಿತು. ಪ್ರತಿಯೊಬ್ಬ ಕೆಲಸಗಾರನೂ ಪಣತೊಟ್ಟು ಕೆಲಸ ಮಾಡಿದ್ದಾರೆ. ಈ ಕೆಲಸಕ್ಕೆ ಶ್ರಮಿಸಿದ ಚಿಕ್ಕ ಕಾರ್ಮಿಕರು, ಎಂಜಿನಿಯರ್ ಗಳು, ತಂತ್ರಜ್ಞರು, ಅಧಿಕಾರಿಗಳನ್ನು ಸನ್ಮಾನ ಮಾಡುವ ಕೆಲಸವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಮಾಡುತ್ತದೆ” ಎಂದು ತಿಳಿಸಿದರು.

“ಅಣೆಕಟ್ಟನ್ನು ಉಳಿಸಿಕೊಂಡಿದ್ದೇ ದೊಡ್ಡ ಪವಾಡ. ಗೇಟ್ ದುರಸ್ತಿ ಮಾಡಿ ರೈತರ ಪಾಲಿನ ನೀರು ಉಳಿಸಿದಂತಾಯಿತು. ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ನೋಡುತ್ತಿತ್ತು. ನಾವು ಇದರಲ್ಲಿ ಯಶಸ್ಸು ಕಂಡಿದ್ದೇವೆ. ಅದಕ್ಕೆ ನಾನು ಪದೇ, ಪದೇ ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದು ಹೇಳುತ್ತಿರುತ್ತೇನೆ” ಎಂದರು.

“ಗೇಟ್ ದುರಸ್ತಿ ಮಾಡಲು ಒಂದಷ್ಟು ನೀರನ್ನು ನದಿಗೆ ಬಿಡಬೇಕಾದ ಅನಿವಾರ್ಯತೆಯಿತ್ತು. ಈಗ ವರುಣನ ಕೃಪೆಯಿಂದ ಮಳೆ ಬರುತ್ತಿದೆ. ರೈತರ ಪಾಲಿನ ನೀರನ್ನು ಅವರಿಗೆ ಬಿಡಲಾಗುವುದು, ರೈತರನ್ನು ಉಳಿಸಿಕೊಳ್ಳುವ ಕೆಲಸ ನಾವು ಮಾಡುತ್ತೇವೆ” ಎಂದು ಹೇಳಿದರು.