ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಉತ್ತರ ಕರ್ನಾಟಕ ಭಾಗದವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದರು. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಲಿದ್ದು, ಆ ಅದೃಷ್ಟ ನನಗೂ ಏಕೆ ಕೂಡಿ ಬರಬಾರದು. ಪ್ರಧಾನಿ ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಿಯಾಗುವುದು ನಿಶ್ಚಿತ. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಲಿಂಗಾಯತ ಬಂಧುಗಳಿಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸುವೆ ಎಂದು ಭರವಸೆ ನೀಡಿದರು..
ಬೆಳಗಾವಿ : ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕದ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಜಾತಿ ಜಾತಿ ಅಂತ ನೋಡದೆ, ದೇಶ ಉಳಿಸುವುದಕ್ಕಾಗಿ ಎಲ್ಲರೂ ವೋಟ್ ಹಾಕಿ ಎಂದರು.
ಜಾರಕಿಹೊಳಿ ಅವರ ಕಾಲಿಗೆ ನಮಸ್ಕರಿಸಿ, ಸಾಹುಕಾರ್ ಸಾಹುಕಾರ್ ಯಾಕೆ ಅನ್ನುತ್ತೀರಿ. ಅವರ ಮನೆಯ ತೊಟ್ಟಿಲನಲ್ಲಿರುವ ಕಂದಮ್ಮಗಳಿಗೂ ನಮಸ್ಕರಿಸುತ್ತೀರಿ. ಯಾಕೆ ನಿಮಗೆ ಸ್ವಾಭಿಮಾನ ಇಲ್ಲವೇ? ನಿಮ್ಮ ಜಮೀನಿನಲ್ಲಿ ಕಬ್ಬು ಬೆಳೆಯುತ್ತೀರಾ ಅಥವಾ ಅವರ ಜಮೀನಿನಲ್ಲಿ ಬೆಳೆಯುತ್ತೀರಾ? ಯಾರಿಗೂ ನಮಸ್ಕರಿಸಬೇಡಿ, ಸ್ವಾವಲಂಬಿಗಳಾಗಿ. ಪ್ರಧಾನಿ ನರೇಂದ್ರ ಮೋದಿಯವರೇ ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುವುದಿಲ್ಲ. ಅಂದ ಮೇಲೆ ಇವರ ಕಾಲಿಗೆ ಏಕೆ ನಮಸ್ಕಾರ ಮಾಡುತ್ತೀರಿ ಎಂದು ಹೇಳಿದರು.
ನಾನು ಯಾರಿಗೂ ಅಪ್ಪಾಜಿ ಅಪ್ಪಾಜಿ ಎಂದು ಕಾಲಿಗೆ ನಮಸ್ಕರಿಸುವುದಿಲ್ಲ. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾನು ಯಾರಿಗೂ ವಂಚನೆ ಮಾಡುವುದಿಲ್ಲ. ರೈತರು ಬರಗಾಲ ಬರಲಿ ಅಂತ ಬಯಸುತ್ತಾರೆ, ಐದು ಲಕ್ಷದ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ವಿಧಾನಸೌಧದಲ್ಲಿ ಇದೇ ವಿಚಾರದಲ್ಲಿ ನನಗೂ ಅವರಿಗೂ ಜಗಳ ಆಯ್ತು. ನಾನು ಹಾಗೇ ಅಂದಿಲ್ಲ ಅಂದರು. ನಿನ್ನ ಮೇಲೆ ಕೇಸ್ ಹಾಕುತ್ತೇನೆ ಅಂದರು. ನನ್ನ ಮೇಲೆ ಈಗಾಗಲೆ 100 ಕೇಸ್ ಇದೆ, ಇದೊಂದು ಹೆಚ್ಚಲ್ಲ, ಕೇಸ್ ಹಾಕಿ ಅಂದೆ ಎಂದು ಯತ್ನಾಳ (ಅಧಿವೇಶನದಲ್ಲಿ ಸಚಿವ ಶಿವಾನಂದ ಪಾಟೀಲ ಮತ್ತು ತಮ್ಮ ಮಧ್ಯೆ ನಡೆದ ಮಾತಿನ ಜಟಾಪಟಿಯನ್ನು) ಸಭೆಯಲ್ಲಿ ಹೇಳಿದರು.
ಇಂದು ಗ್ಯಾರಂಟಿ ಗ್ಯಾರಂಟಿ ಅಂತಿದ್ದಾರೆ, ಆದರೆ ದೇಶ ಉಳಿದರೆ ಮಾತ್ರ ಗ್ಯಾರಂಟಿ ಜಾರಿಯಲ್ಲಿರುತ್ತದೆ. ದೇಶ ಉಳಿಯದಿದ್ದರೆ, ಮುಸ್ಲಿಂರೆಲ್ಲ ಒಂದಾದರೆ ಹಿಂದೂಗಳ ಜಮೀನು ಉಳಿಯಲ್ಲ, ಮನೆಯೂ ಉಳಿಯಲ್ಲ. ಒಂದೇ ಮತಾಂತರವಾಗಬೇಕು, ಇಲ್ಲವೇ ಸಾಯಬೇಕು. ಇವೆರಡೇ ಆಯ್ಕೆ ಉಳಿಯುತ್ತದೆ. ನಮ್ಮ ಅಜ್ಜ, ಮುತ್ತಜ್ಜರು ಟಿಪ್ಪು ಸುಲ್ತಾನ್ ವಿರುದ್ಧ, ಔರಂಗಜೇಬನ ವಿರುದ್ಧ ಹೋರಾಟ ಮಾಡಿದ್ದಕ್ಕೆ ಹಿಂದೂಗಳಾಗಿ ಉಳಿದಿದ್ದೇವೆ. ನಾವು ಯಾರಾದರೂ ಹಿಂದೂಗಳಾಗಿ ಉಳಿದಿದ್ದರೆ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯದಿಂದ ಎಂದು ಹೇಳಿದರು.