ಬೆಳಗಾವಿ : ದಿ.ಸುರೇಶ ಅಂಗಡಿಯವರಿಗೆ ಸೇರಿರುವ ಸದಾಶಿವನಗರದ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಏಪ್ರಿಲ್ 12 ರಂದು ಬೆಳಗ್ಗೆ 9:30 ಕ್ಕೆ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಚುನಾವಣಾ ಕಚೇರಿಯ ಉದ್ಘಾಟನೆ ನೆರವೇರಲಿದೆ. ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರು ಜಗದೀಶ ಶೆಟ್ಟರ್ ಅವರ ಚುನಾವಣಾ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಬೆಳಗಾವಿಯ ಹಾಲಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕರಾದ ಅನಿಲ್ ಬೆನಕೆ, ಸಂಜಯ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ, ಗೀತಾ ಸುತಾರ ಮತ್ತಿತರರು ಉಪಸ್ಥಿತರಿರುವರು.

ಹುಬ್ಬಳ್ಳಿಯಿಂದ ಬೆಳಗಾವಿಗೆ ಬಂದು ಜಗದೀಶ ಶೆಟ್ಟರ್ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ದ ರಾಜ್ಯದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆ ನಡೆಸುತ್ತಿದ್ದಾರೆ. ಹೀಗಾಗಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಗದೀಶ ಶೆಟ್ಟರ್ ಅವರ ಬೆಳಗಾವಿಯ ಅಡ್ರೆಸ್ ಎಲ್ಲಿದೆ ಎಂದು ಇತ್ತೀಚಿಗೆ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಶೆಟ್ಟರ್ ಯುಗಾದಿಯಂದು ಕುಮಾರಸ್ವಾಮಿ ಬಡಾವಣೆಯಲ್ಲಿ ಎರಡು ಮಹಡಿಗಳ ಮನೆಯನ್ನು ಬಾಡಿಗೆಗೆ ಪಡೆದು ಮನೆ ಮಾಡಿದ್ದಾರೆ‌. ಇದೀಗ ಅವರು ಚುನಾವಣಾ ಪ್ರಚಾರ ಕಚೇರಿಯನ್ನು ಸಹಾ ಆರಂಭಿಸುತ್ತಿರುವುದು ವಿಶೇಷವಾಗಿದೆ.

ದಿ. ಸುರೇಶ ಅಂಗಡಿ ಅವರ ಪಾಲಿಗೆ ಲಕ್ಷ್ಮೀ ಕಾಂಪ್ಲೆಕ್ಸ್ ಎನ್ನುವುದು ಅದೃಷ್ಟದ ತಾಣವಾಗಿತ್ತು. ಅವರು ಇದೇ ಕಟ್ಟಡದಿಂದ ತಮ್ಮೆಲ್ಲ ಕಾರ್ಯಭಾರವನ್ನು ನಿಭಾಯಿಸುತ್ತಿದ್ದರು. ಇದೇ ಕಟ್ಟಡದಲ್ಲಿ ಚುನಾವಣಾ ಕಚೇರಿಯನ್ನು ಪ್ರಾರಂಭಿಸುವ ಮೂಲಕ ಬೆಳಗಾವಿಯಲ್ಲಿ ತಮ್ಮ ವಿಜಯದುಂದುಭಿ ಮೊಳಗಿಸುವರೋ ಕಾದು ನೋಡಬೇಕಿದೆ.