ನವದೆಹಲಿ: ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ 15 ಮಂದಿಯ ತಂಡವನ್ನು ಆಯ್ಕೆ ಮಾಡಲಾಗಿದೆ. ಕೆ.ಎಲ್‌. ರಾಹುಲ್‌ ಅವರನ್ನು ಕೈಬಿಡಲಾಗಿದೆ.
ಮಂಗಳವಾರ (ಏಪ್ರಿಲ್‌ 30 ) ನಡೆದ ಭಾರತ ತಂಡದ ಆಯ್ಕೆ ಸಮಿತಿ ಸಭೆಯಲ್ಲಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಯಿತು. ಹಾರ್ದಿಕ್ ಪಾಂಡ್ಯಾಗೆ ಉಪನಾಯಕ ಜವಾಬ್ದಾರಿ ನೀಡಲಾಗಿದ್ದು, ಈ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಾಗೂ ಈಗ ಚೇತರಿಸಿಕೊಂಡು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್ ಅವರಿಗೆ ವಿಕೆಟ್ ಕೀಪರ್ ಬ್ಯಾಟರ್ ಜವಾಬ್ದಾರಿ ನೀಡಲಾಗಿದೆ.ಆದರೆ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಅಧ್ಯಕ್ಷ ಅಜಿತ್​ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕೈಬಿಟ್ಟಿದೆ.

 

ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕ ಆರಂಭಿಕ ಆಟಗಾರನಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಐಪಿಎಲ್ 2024 ರಲ್ಲಿ ಶಿವಂ ದುಬೆ ಅವರ ಅದ್ಭುತ ಫಾರ್ಮ್‌ ತೋರಿದ್ದರಿಂದ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸ್ಪಿನ್ನರ್‌ ಯುಜ್ವೇಂದ್ರ ಚಾಹಲ್ ಅವರಿಗೆ ಮರಳಿ ತಂಡದಲ್ಲಿ ಸ್ಥಾನ ನೀಡಲಘಿದೆ. ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಅರ್ಶ್‌ದೀಪ್ ಸಿಂಗ್ ಅವರನ್ನು ವೇಗದ ಬೌಲರ್‌ ಆಗಿ ತಂಡ‌ಕ್ಕೆ ಆಯ್ಕೆ ಮಾಡಲಾಗಿದೆ . ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಆಯ್ಕೆಗಳಾಗಿದ್ದರೆ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಆಲ್ ರೌಂಡರ್‌ಗಳಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ ಯಾದವ್ ಸ್ಪೆಷಲಿಸ್ಟ್ ಬ್ಯಾಟರ್ ಆಗಲಿದ್ದಾರೆ.
ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ತಮ್ಮ T20 ವಿಶ್ವಕಪ್ 2024 ಅಭಿಯಾನವನ್ನು ನ್ಯೂಯಾರ್ಕ್‌ನಲ್ಲಿ ಪ್ರಾರಂಭಿಸಲಿದ್ದು, ಜೂನ್ 9 ರಂದು ಅದೇ ಸ್ಥಳದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.ಭಾರತವು ಜೂನ್ 12 ಮತ್ತು 15 ರಂದು ಕ್ರಮವಾಗಿ ಅಮೆರಿಕ ಮತ್ತು ಕೆನಡಾವನ್ನು ಎದುರಿಸಲಿದೆ.

15 ಸದಸ್ಯರ ತಂಡದಿಂದ ಶುಭಮನ್ ಗಿಲ್ ಮತ್ತು ರಿಂಕು ಸಿಂಗ್ ಅವರನ್ನು ಪ್ರಮುಖ ಹೊರಗಿಡಲಾಗಿದೆ. ಆದರೆ ಇಬ್ಬರೂ ಕ್ರಿಕೆಟಿಗರನ್ನು ರಸರ್ವ್‌ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ವೇಗದ ಬೌಲರ್‌ಗಳಾದ ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ಕೂಡ ರಿಸರ್ವ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ಗಾಯ ಅಥವಾ ತಂತ್ರದಲ್ಲಿ ಬದಲಾವಣೆಯ ಸಂದರ್ಭದಲ್ಲಿ ಅವರು ತಂಡದಲ್ಲಿ ಸ್ಥಾನ ಪಡೆಯಬಹುದು.
2022 ರಲ್ಲಿ ಅವರ ಮಾರಣಾಂತಿಕ ಕಾರು ಅಪಘಾತದ ನಂತರ ಆಟದಲ್ಲಿ ಕಾಣಿಸಿಕೊಳ್ಳದ ರಿಷಬ್ ಪಂತ್‌ಗೆ ಇದು ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಈವರೆಗೆ IPL 2024 ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರಿಗೆ T20 ವಿಶ್ವಕಪ್ 2024 ತಂಡದಲ್ಲಿ ಸ್ಥಾನ ದೊರಕಿದೆ.
ಟಿ 20 ವಿಶ್ವಕಪ್ 2024 ರ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ ಯಾದವ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ರಿಸರ್ವ್‌ ಆಟಗಾರರು : ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್