ನವದೆಹಲಿ/ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ ಅವರು ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರವು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೀಗೆ ಅನ್ಯಾಯವಾದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಗುರುವಾರ ದೆಹಲಿಯಲ್ಲಿ ಕೇಂದ್ರದ ಮಧ್ಯಂತರ ಬಜೆಟ್ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ನೀಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ದಕ್ಷಿಣ ಭಾರತದವರು ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಅವರು ಹೇಳಿದ್ದಾರೆ.
ನಾವು ನಮಗೆ ಬರಬೇಕಾದ ನ್ಯಾಯಯುತವಾದ ಹಣದ ಮಾತ್ರ ಬೇಡಿಕೆ ಮಾತ್ರ ಸಲ್ಲಿಸುತ್ತಿದ್ದೇವೆ. ದಕ್ಷಿಣ ಭಾರತದ ರಾಜ್ಯಗಳಿಗೆ ಜಿಎಸ್ಟಿ ಮತ್ತು ನೇರ ತೆರಿಗೆಯ ಸಮರ್ಪಕವಾದ ಪಾಲನ್ನು ಕೇಂದ್ರವು ಸರಿಯಾಗಿ ನೀಡುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳು ಅನ್ಯಾಯ ಮಾಡುತ್ತಿದೆ. ದಕ್ಷಿಣ ರಾಜ್ಯಗಳಿಂದ ಸಂಗ್ರಹಿಸುವ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ನೀಡಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಪ್ರತ್ಯೇಕ ದೇಶದ ಬೇಡಿಕೆಗೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ದೇಶದ ವಿವಿಧ ರಾಜ್ಯಗಳಿಗೆ ಹೇಗೆ ಹಣ ಹಂಚಿಕೆಯಾಗಿದೆ ಎಂಬುದನ್ನು ನೋಡಿದರೆ ನಮ್ಮ ರಾಜ್ಯಗಳ ಹಣವನ್ನು ಉತ್ತರದ ರಾಜ್ಯಗಳಿಗೆ ನೀಡುತ್ತಿರುವುದು ಸ್ಪಷ್ಟವಾಗುತ್ತದೆ. ಕೇಂದ್ರವು ನಮ್ಮಿಂದ 4 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಪಡೆಯುತ್ತಿದ್ದು, ಅದಕ್ಕೆ ಪ್ರತಿಯಾಗಿ ನಮಗೆ ಅತ್ಯಲ್ಪ ಹಣ ನೀಡುತ್ತಿದೆ. 15ನೇ ಹಣಕಾಸು ಆಯೋಗದ ಶಿಫಾರಸ್ಸು ಮಾಡಿರುವ ಅನುದಾನವೂ ರಾಜ್ಯಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಇದು ಚುನಾವಣಾ ಬಜೆಟ್ ಆಗಿದ್ದು, ಇದರಲ್ಲಿ ಹೊಸದೇನೂ ಇಲ್ಲ.ಇದು ಚುನಾವಣಾ ಬಜೆಟ್. ಮಧ್ಯಂತರ ಬಜೆಟ್ನಲ್ಲಿ ಹೆಸರು ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಡಿ ಕೆ ಸುರೇಶ ಹೇಳಿದರು.
ಜವಾಬ್ದಾರಿ ಅರಿತು ಮಾತನಾಡಬೇಕು…
ಸಂಸದ ಡಿ.ಕೆ.ಸುರೇಶ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಡಿ.ಕೆ.ಸುರೇಶ ಅವರು ಸಂಸದರಾಗಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಸಂವಿಧಾನದ 75ನೇ ವರ್ಷದ ರಥಯಾತ್ರೆ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಸದರು ಈ ರೀತಿ ಹೇಳಿಕೆ ಕೊಟ್ಟಿರುವುದು ಖಂಡನೀಯ ಎಂದರು.
ಯಾವುದೇ ಒಬ್ಬ ಜನಪ್ರತಿನಿಧಿಯು ತಮ್ಮ ಸ್ಥಾನವನ್ನು ಅಲಂಕರಿಸಿದ ಸಂದರ್ಭದಲ್ಲಿ ಸಂವಿಧಾನವನ್ನು ಮುಂದಿಟ್ಟುಕೊಂಡು ಭಾರತದ ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಆದರೆ ಡಿ.ಕೆ.ಸುರೇಶ ಅವರು ಎಲ್ಲೋ ಒಂದು ಕಡೆ ಇದನ್ನು ಮರೆತಿರುವಂತಿದೆ ಎಂದರು.
ಇವರು ಯಾವ ಅಭಿವೃದ್ಧಿ, ಯಾವ ಅನುದಾನದ ಮಾತನಾಡುತ್ತಿದ್ದಾರೆ? ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ 2004-14ರವರೆಗೆ 60 ಸಾವಿರ ಕೋಟಿ ಕೊಟ್ಟಿದ್ದರು. 2014ರಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ 2,36,000 ಕೋಟಿ ಅನುದಾನವನ್ನು ಕೊಟ್ಟಿದ್ದಾರೆ. ಇದನ್ನು ಸಂಸದ ಸುರೇಶ ಅವರು ಇದನ್ನು ಗಮನಿಸಬೇಕು ಎಂದು ಹೇಳಿದರು.
ತೆರಿಗೆ ಹಂಚಿಕೆ (ಟ್ಯಾಕ್ಸ್ ಡೆವಲ್ಯೂಶನ್) ಮೂಲಕ ರಾಜ್ಯಕ್ಕೆ ಯುಪಿಎ ಸರ್ಕಾರದ ಅವಧಿಯಲ್ಲಿ 81 ಸಾವಿರ ಕೋಟಿ ರೂ. ಬಂದಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ 2,82,000 ಕೋಟಿ ರೂ.ಹಣವನ್ನು ಕೊಡಲಾಗಿದೆ. ಹಾಗಾಗಿ ಅಂಕಿಅಂಶ ಅರ್ಥ ಮಾಡಿಕೊಳ್ಳದೇ ಜವಾಬ್ದಾರಿಯುತ ಸಂಸದರು ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಇದು ದುರದೃಷ್ಟಕರ ಎಂದು ಟೀಕಿಸಿದರು.
ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಪಕ್ಷವು ಒಡೆದು ಆಳುವ ಇತಿಹಾಸ ಹೊಂದಿದ್ದು, ಅದರ ಸಂಸದ ಡಿ.ಕೆ. ಸುರೇಶ ಈಗ ಉತ್ತರ ಮತ್ತು ದಕ್ಷಿಣವನ್ನು ವಿಭಜಿಸುವ ನಾಟಕವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
“ಒಂದೆಡೆ, ಅವರ ನಾಯಕ ರಾಹುಲ್ ಗಾಂಧಿ ಅವರು ತಮ್ಮ ‘ಜೋಡೋ’ ಯಾತ್ರೆಗಳ ಮೂಲಕ ದೇಶವನ್ನು ‘ಒಗ್ಗೂಡಿಸಲು’ ಪ್ರಯತ್ನಿಸುತ್ತಿದ್ದಾರೆ, ಮತ್ತೊಂದೆಡೆ, ರಾಷ್ಟ್ರವನ್ನು ಒಡೆಯುವ ಮಾತನಾಡುವ ಸಂಸದ ನಮ್ಮಲ್ಲಿದ್ದಾರೆ. ಕಾಂಗ್ರೆಸ್ನ ಒಡೆದು ಆಳುವ ಕಲ್ಪನೆ ವಸಾಹತುಶಾಹಿಗಳು ಅನುಸರಿಸಿದ್ದಕ್ಕಿಂತ ಕೆಟ್ಟದಾಗಿದೆ” ಎಂದು ತೇಜಸ್ವಿ ಸೂರ್ಯ ಟ್ವೀಟ್ನಲ್ಲಿ ತಿಳಿಸಿದ್ದಾರೆ.