ಬೆಂಗಳೂರು:
2023-24ನೇ ಸಾಲಿನ ಬಿ.ಇಡಿ ಕೋರ್ಸ್ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಡಿ.11ರ ವರೆಗೆ ವಿಸ್ತರಿಸಲಾಗಿದೆ.

ಬಿ.ಇಡಿ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಈಗಾಗಲೇ ಅರ್ಜಿ ಸಲ್ಲಿಕೆ ಅವಧಿ ಮುಗಿದಿದ್ದು, ಅಭ್ಯರ್ಥಿಗಳ ಮನವಿ ಮೇರೆಗೆ ಅವಧಿ ವಿಸ್ತರಿಸಲಾಗಿದೆ. ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ತಿಳಿಸಿದೆ.

ಮಹಾಂತೇಶ ಕೌಜಲಗಿ ಪ್ರಸ್ತಾಪ :
ಬಿ.ಇಡಿ ಕೋರ್ಸ್ ಪ್ರವೇಶ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಡಿ.11 ರವರೆಗೆ ವಿಸ್ತರಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಶೂನ್ಯವೇಳೆಯಲ್ಲಿ ಮಹಾಂತೇಶ ಕೌಜಲಗಿ ಪ್ರಸ್ತಾಪಕ್ಕೆ ಉನ್ನತ ಶಿಕ್ಷಣ ಸಚಿವರ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳ ಫಲಿತಾಂಶ ವಿಳಂಬ ಹಿನ್ನೆಲೆ ಬಿ.ಎಡ್. ಪ್ರವೇಶ ನೋಂದಣಿ ಕೊನೆಯ ದಿನ ಮುಕ್ತಾಯ ಆಗುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದನ್ನು ಗಮನಿಸಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.

2023-24ನೇ ಸಾಲಿಗೆ ಎರಡು ವರ್ಷದ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿತ್ತು. ಅದರಂತೆ ಆಸಕ್ತರು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ನ. 29 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ವಿಸ್ತರಿಸಲಾಗಿದೆ.