ಶಿರಸಿ: ಅಡಕೆ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಅಡಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಳಂಕದಿಂದ ಮುಕ್ತಗೊಳಿಸಬೇಕು ಎಂಬ ಉದ್ದೇಶದಿಂದ ಗುಣಮಟ್ಟದ ಅಡಕೆ ಕಾರ್ಯಾಗಾರವನ್ನು ನಗರದ ಶ್ರೀಪಾದ ಹೆಗಡೆ ಕಡವೆ ಕಲ್ಯಾಣ ಮಂಟಪದಲ್ಲಿ ನವೆಂಬರ್ 23 ರ ಬೆಳಗ್ಗೆ 10 ಕ್ಕೆ ಆಯೋಜಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಅಡಕೆ ಮತ್ತು ಸಂಬಾರ ಬೆಳೆಗಾರರ ಸಂಘದ ಪ್ರಮುಖ ಗಣೇಶ ಭಟ್ಟ ಉಪ್ಪೋಣಿ ಹೇಳಿದರು.
ನಗರದಲ್ಲಿ ಮಂಗಳವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉತ್ಪಾದಕರ ಹಂತದಲ್ಲಿ ಅಡಕೆ ಆರೋಗ್ಯಕಾರಕವಾಗಿದೆ. ಆದರೆ ಗ್ರಾಹಕನಿಗೆ ತಲುಪುವಾಗ ಅದು ಆರೋಗ್ಯಕ್ಕೆ ಹಾನಿಕಾರಕವೆಂದು ಕೆಲವರು ಹೇಳುತ್ತಾರೆ. ಉತ್ಪಾದಕರಿಂದ ಗ್ರಾಹಕರ ವರೆಗೆ ಅದು ಸಾಗುವಾಗ ಮಧ್ಯದಲ್ಲಿ ಅಡಕೆ ಯಾವ ರೀತಿಯಲ್ಲಿ ಯಾರಿಂದ ಕಲಬೆರಕೆಯಾಗುತ್ತಿದೆ ಅಥವಾ ಗುಣಮಟ್ಟ ಕುಸಿಯುತ್ತಿದೆ ಎಂಬುದನ್ನು ನಾವು ಕಂಡು ಹಿಡಿಯಬೇಕಾಗಿದೆ. ಅಡಕೆ ಸೇವನೆ ಆರೋಗ್ಯಕ್ಕೆ ಪೂರಕ ಎಂಬ ನೈಜತೆಯನ್ನು ನಾವು ತಿಳಿಸಬೇಕಿದೆ. ಇದಕ್ಕೆ ಇರಬಹುದಾದ ಸಾಧಕ-ಬಾಧಕಗಳ ಕುರಿತು ಕುರಿತು ಸಮಸ್ತ ಅಡಕೆ ಬೆಳೆಗಾರರು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದು ಸರ್ಕಾರ ಮತ್ತು ನ್ಯಾಯಾಂಗದ ಮಟ್ಟದಲ್ಲಿ ಆಗಬೇಕಾದ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಅಡಕೆಗೆ ಕಲಬೆರಕೆಯಾಗುವುದನ್ನು ಪತ್ತೆ ಮಾಡಿ ಅದನ್ನು ನಿಯಂತ್ರಿಸುವುದು ಸರ್ಕಾರದಿಂದ ಮಾತ್ರ ಸಾಧ್ಯ. ಈ ವಿಷಯವನ್ನು ಬೆಳೆಗಾರರು, ಸಾರ್ವಜನಿಕರು ಹಾಗೂ ಸರಕಾರದ ಗಮನಕ್ಕೆ ತರಲೇಬೇಕಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಮಂಗಳೂರು ಜಿಲ್ಲೆಯ ಬೆಳೆಗಾರರು, ಸಹಕಾರಿ ಧುರೀಣರು, ಜನಪ್ರತಿನಿಧಿಗಳನ್ನು ಒಳಗೊಂಡು ಕಾರ್ಯಾಗಾರ ನಡೆಯಲಿದೆ. ಹಿರಿಯ ಸಹಕಾರಿ ಎಚ್.ಎಸ್.ಮಂಜಪ್ಪ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಪಿಸಿಆರ್‌ಐ ನಿರ್ದೇಶಕ ಡಾ.ಬಾಲಚಂದ್ರ ಹೆಬ್ಬಾರ, ಶಿವಮೊಗ್ಗ ಕೃಷಿ, ತೋಟಗಾರಿಕಾ ಅರಣ್ಯ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಆರ್.ಸಿ.ಜಗದೀಶ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ ಕೊಡ್ಗಿ, ಕರ್ನಾಟಕ ರಾಜ್ಯ ಅಡಕೆ ಮಹಾಮಂಡಳ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ ಪಾಲ್ಗೊಳ್ಳಲಿದ್ದಾರೆ ಎಂದು ಗಣೇಶ ಭಟ್ ಉಪ್ಪೋಣಿ ಮಾಹಿತಿ ನೀಡಿದರು.
ನವೆಂಬರ್ 23 ರಂದು ಬೆಳಿಗ್ಗೆ 11: 30ಕ್ಕೆ ಬೆಳೆಗಾರರ ಹಂತದಲ್ಲಿ ಆರೋಗ್ಯಕರ ಅಡಕೆ ಸಂಸ್ಕರಣೆ ಗೋಷ್ಠಿ ನಡೆಯಲಿದೆ. ಪ್ರಗತಿಪರ ಕೃಷಿಕ ಭಾರ್ಗವ ಹೆಗಡೆ ಶೀಗೇಹಳ್ಳಿ ವಿಷಯ ಮಂಡಿಸಲಿದ್ದಾರೆ.ಮಧ್ಯಾಹ್ನ 12 ರಿಂದ ಮಾರುಕಟ್ಟೆ ಹಂತದಲ್ಲಿ ಅಡಕೆ ಗುಣಮಟ್ಟ ವಿಷಯವಾಗಿ ಜಿಲ್ಲಾ ಛೇಂಬರ್ ಆಪ್ ಕಾಮರ್ಸ್ ಅಧ್ಯಕ್ಷ ಕೆ.ಬಿ.ಲೊಕೇಶ ಹೆಗಡೆ ವಿಷಯ ಮಂಡನೆ ಮಾಡಲಿದ್ದಾರೆ. ಅಡಕೆ ಗುಣಮಟ್ಟ ಮತ್ತು ನಿಯಂತ್ರಣ ಕುರಿತು ಪರಿಸರ ವಿಜ್ಞಾನಿ ಕೇಶವ ಕೂರ್ಸೆ ಮಾತನಾಡಲಿದ್ದಾರೆ. ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕರಾದ ಭೀಮಣ್ಣ ನಾಯ್ಕ ಹಾಗೂ ಶಿವರಾಮ ಹೆಬ್ಬಾರ ಪಾಲ್ಗೊಳ್ಳಲಿದ್ದಾರೆ. ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷತೆ ವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಗಳ ಪದಾಧಿಕಾರಿಗಳಾದ ಎಂ.ವಿ.ಹೆಗಡೆ ಹುಳಗೋಳ, ನಾರಾಯಣ ಹೆಗಡೆ ಗಡಿಕೈ, ವಿಶ್ವೇಶ್ವರ ಭಟ್ಟ ಕೋಟೆಮನೆ, ಜಿ.ಆರ್. ಹೆಗಡೆ ಬೆಳ್ಳೆಕೇರಿ, ಈಶಣ್ಣ ನೀರ್ನಳ್ಳಿ, ಜಿ ಡಿ. ಹೆಗಡೆ ಓಣಿಕೇರಿ, ಲೋಕೇಶ ಹೆಗಡೆ ಹುಲೇಮಳಗಿ, ಮಹೇಂದ್ರ ಭಟ್ಟ ಸಾಲೆಕೊಪ್ಪ, ಭಾರ್ಗವ ಹೆಗಡೆ ಶೀಗೆಹಳ್ಳಿ, ಪ್ರಸಾದ ಶರ್ಮ ಸಾಲ್ಕಣಿ ಮೊದಲಾದವರಿದ್ದರು.