ಬೆಳಗಾವಿ : ಬೆಳಗಾವಿಯ ಸಾಂಸ್ಕೃತಿಕ ಲೋಕಕ್ಕೆ ಮುಕುಟಮಣಿ ಎಂಬಂತೆ ಅತ್ಯಾಧುನಿಕ ಸಾಂಸ್ಕೃತಿಕ ಸಭಾಂಗಣವನ್ನು ನೀಡಿದ ಕೊಡುಗೆ ಕೆಎಲ್‌ಇ ಸಂಸ್ಥೆಗೆ ಸಲ್ಲುತ್ತದೆ. ೧೯೮೨ರಲ್ಲಿ ಅಲ್ಪ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದ ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜಿನ ಡಾ.ಬಿ.ಎಸ್.ಜೀರಗೆ ಸಭಾಂಗಣವನ್ನು ಕಾಲಕಾಲಕ್ಕೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನವೀಕರಣಗೊಳಿಸಲಾಗಿದೆ. ಅನೇಕ ಐತಿಹಾಸಿಕ ಸಾಂಸ್ಕೃತಿಕ ಸಮಾರಂಭಗಳಿಗೆ ವೇದಿಕೆಯಾಗಿರುವುದು ಅಭಿಮಾನದ ಸಂಗತಿ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.
ನವೀಕರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಗಳನ್ನೊಳಗೊಂಡ ೧೨೦೦ ಆಸನಗಳ ಸಾಮರ್ಥ್ಯದ ಬಿ ಎಸ್ ಜೀರಗೆ ಸಭಾಂಗಣವನ್ನು ಜನಸೇವೆಗೆ ಶ್ರೀಮತಿ ಆಶಾ ಕೋರೆಯವರೊಂದಿಗೆ ಅರ್ಪಿಸಿ ಮಾತನಾಡಿದ, ಅವರು ನವೀಕರಿಸಿದ ಸಭಾಂಗಣವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಆಡಿಟೋರಿಯಂನಾದ್ಯಂತ ಅಲ್ಟ್ರಾ ಸೌಂಡ್‌ನ್ನು ಸಮವಾಗಿ ವಿತರಿಸಲಾಗಿದ್ದು, ಎಲ್ಲಿಯೂ ಧ್ವನಿ ವ್ಯತ್ಯಾಸವೆನಿಸಲಾರದು. ಸಂಪೂರ್ಣವಾಗಿ ಸಭಾಂಗಣವು ಹವಾನಿಯಂತ್ರಿತವಾಗಿದೆ. ಅತ್ಯಾಧುನಿಕ ಪರದೆಯೊಂದಿಗೆ ಅತ್ಯಾಧುನಿಕ ಮತ್ತು ಅತ್ಯುನ್ನತ ಬೆಳಕಿನ ವ್ಯವಸ್ಥೆಗಳೊಂದಿಗೆ ಸಂಪೂರ್ಣವಾಗಿ ಮೇಲ್ದರ್ಜೆಗೆ ಉನ್ನತೀಕರಿಸಲಾಗಿದೆ ಎಂದು ವಿವರಿಸಿದರು.
ಹುಬ್ಬಳ್ಳಿಯಲ್ಲಿಯೂ ಸುಸಜ್ಜಿತ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ೧೦೦೦ ಹಾಸಿಗೆಗಳ ಆಸ್ಪತ್ರೆ ಹಾಗೂ ಮಹಾವಿದ್ಯಾಲಯ ನಿರ್ಮಾಣಗೊಳ್ಳುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಬೋಧನಾ ಕೊಠಡಿ ಸೇರಿದಂತೆ ಎಲ್ಲ ವಿಭಾಗಗಳನ್ನು ಅತ್ಯಾಧುನೀಕರಣಗೊಳಿಸಲಾಗಿದೆ. ಈಗಾಗಲೇ ಎಲ್ಲ ಕಾಮಗಾರಿಗಳು ಮುಗಿದಿದ್ದು, ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ಮುಗಿದಿದೆ. ಇನ್ನೆರಡು ತಿಂಗಳಲ್ಲಿ ಕ್ಯಾನ್ಸರ ಆಸ್ಪತ್ರೆ ಜನಸೇವೆಗೆ ಅರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಸಭಾಂಗಣದ ವೈಶಿಷ್ಟ್ಯತೆ : ದೊಡ್ಡ ಪೋಡಿಯಂ, ಅತಿಥಿಗಳಿಗಾಗಿ ವಿಶೇಷ ಕುರ್ಚಿಗಳೊಂದಿಗೆ ಸ್ನೇಹಶೀಲ ಆಸನಗಳು, ಈವೆಂಟ್‌ಗಳ ಸೂಕ್ಷ್ಮ ವೀಕ್ಷಣೆಗಾಗಿ ಬಾಲ್ಕನಿ ಆಸನಗಳು, ಐಅಆ ಪ್ರೊಜೆಕ್ಟರ್‌ಗಳು, ಪರದೆಗಳು ಮತ್ತು ಪರಿಸರಸ್ನೇಹಿ ಕೋಣೆಗಳೊಂದಿಗೆ ಉತ್ತಮವಾಗಿ ಸುಸಜ್ಜಿತಗೊಳಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಂಡಿರುವ ಡಾ.ಬಿ.ಎಸ್.ಜೀರಗೆ ಎಲ್ಲರ ಮನವನ್ನು ಸೂರೆಗೊಳ್ಳುವಂತಿದೆ. ಇಲ್ಲಿ ಕುಳಿತ ಸಮಾರಂಭಗಳನ್ನು ಸಹೃದಯರು ಪ್ರೀತಿಯಿಂದ ಆಸ್ವಾದಿಸಬಹುದು. ಅಂತೆಯೆ ಈ ಸಭಾಭವನದ ಮೇಲೆ ೬೦೦ ಆಸನಗಳ ಡಾ.ಎಚ್.ಬಿ.ರಾಜಶೇಖರ ಹಾಲ್, ೩೦೦ ಆಸನಗಳ ಡಾ. ಬಿ.ಎಸ್.ಕೊಡಕಣಿ ಹಾಲ್, ೧೫೦ ಆಸನಗಳ ಡಾ.ವಿ.ಡಿ.ಪಾಟೀಲ ಹಾಲ್‌ಗಳು ಅತ್ಯಾಕರ್ಷಕವಾಗಿದ್ದು ಈಗಾಗಲೇ ಕಾರ್ಯಾರಂಭಮಾಡಿವೆ. ಬೆಳಗಾವಿಯ ಪರಿಸರದಲ್ಲಿ ಒಂದೇ ಸಭಾಂಗಣದ ಆವರಣದಲ್ಲಿ ನಾಲ್ಕು ಸುಸಜ್ಜಿತ ಸಾಂಸ್ಕೃತಿಕ ಭವನಗಳು ಒಂದೇ ಸೂರಿನಡಿ ರೂಪಗೊಂಡಿರುವುದು ಒಂದು ದಾಖಲೆಯೇ ಆಗಿದೆ. ಕೆಎಲ್‌ಇ ಸಂಸ್ಥೆ, ಕಾಹೆರ್‌ಗೆ ಸಂಬಂಧಿಸಿದ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮಾರಂಭಗಳು, ೭೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಶರಣ ಸಾಹಿತ್ಯ ಪರಿಷತ್ ಸಮಾರಂಭ, ಯುವಜನೋತ್ಸವ, ವಿಶ್ವ ಕನ್ನಡ ಸಮ್ಮೇಳನದಂತಹ ಅನೇಕ ಸಮಾರಂಭಗಳಿಗೂ ಈ ಸಭಾಂಗಣ ಸಾಕ್ಷಿಯಾಗಿರುವುದನ್ನು ಅವಲೋಕಿಸಬಹುದೆಂದು ಡಾ.ಕೋರೆಯವರು ಹೇಳಿದರು.
ಕಾಹೇರ್ ಕುಲಪತಿ ಡಾ.ನೀತಿನ್ ಗಂಗಾನೆ, ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ, ಕುಲಸಚಿವರಾದ ಡಾ.ಎಂ.ಎಸ್.ಗಣಾಚಾರಿ, ಕೆಎಲ್‌ಇ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಡಾ.ಅವಿನಾಶ ಕವಿ ನಿರೂಪಿಸಿದರು.