ಬೆಳಗಾವಿ : ರೋಗಿಯ ಆರೈಕೆಯಲ್ಲಿ ತೊಡಗುವ ಸೇವೆ ಅತ್ಯಂತ ಒಳ್ಳೆಯದು. ಕರುಣಾಮಯಿಯಾಗಿ ತಾಯಿ ರೂಪದಲ್ಲಿ ಆರೈಕೆ ಮಾಡುವ ನರ್ಸಿಂಗ್ ವೃತ್ತಿಯು ಅಷ್ಟೇ ಕಠಿಣವಾದದ್ದು. ಆದ್ದರಿಂದ ಪ್ರಸಕ್ತ ವೈದ್ಯಕೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತ ಅವುಗಳನ್ನು ಅಳವಡಿಸಿಕೊಳ್ಳಬೇಕು. ಈಗಿರುವ ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಹಾಗೂ ಧನಾತ್ಮಕ ಭಾವನೆಯಿಂದ ಕಲಿಕೆ ನಿರಂತರವಾಗಿರಲಿ. ಶಸ್ತ್ರಾಸ್ತ್ರ ಪಡೆ ಸೇರಿದಂತೆ ವಿಶ್ವದಲ್ಲಿ ಸಾಕಷ್ಟು ಅವಕಾಶಗಳುಂಟು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ವಿಶ್ವ ನರ್ಸಿಂಗ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನರ್ಸಿಂಗ್ ಸಿಬ್ಬಂದಿಯು ರೋಗಿಗಳ ಆರೈಕೆಯೊಂದಿಗೆ ಸಂಶೋಧನೆಗಳಲ್ಲಿ ತೊಡಗಬೇಕು. ಸದಾ ಮಾಹಿತಿಯೊಂದಿಗೆ ಸನ್ನದ್ದವಾಗಿರಬೇಕು ಎಂದ ಅವರು, ನರ್ಸಿಂಗ್ ಸೇವೆ ಬಹಳ ಮುಖ್ಯ. ನರ್ಸಿಂಗ್ ಸೇವೆಯ ಅವಶ್ಯಕತೆ ಸಾಕಷ್ಟಿದ್ದು, ವೈದ್ಯರಿಗಿಂತ ಮುಂಚೆ ರೋಗಿಗಳ ಸಂಪರ್ಕಕ್ಕೆ ಬರುವವರು ಶುಶ್ರೂಶಕರು. ಸಹಜವಾಗಿಯೆ ವೈದ್ಯರು ಮತ್ತು ರೋಗಿಗಳ ಮದ್ಯೆ ಶುಶ್ರೂಶಕರು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ.ಜಾಲಿ ಮಾತನಾಡಿ, 24 ವರ್ಷಗಳ ಹಿಂದಿನ ಭೂಕಂಪ, 2005 ರಲ್ಲಿನ ಪ್ರವಾಹ ಹಾಗೂ ಸುನಾಮಿ ಸಂದರ್ಭದಲ್ಲಿ ನರ್ಸಿಂಗ್ ಸಿಬ್ಬಂದಿ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಅಚಲ ಧೃಡವಾದ ನಂಬಿಕೆಯೊಂದಿಗೆ ಗುರಿ ಮುಟ್ಟುವವರೆಗೆ ಓಡಬೇಕಾಗುತ್ತದೆ. ಪ್ರಯತ್ನವೇ ಪರಮಾತ್ನ ಸೇವೆ ಎಂದರು.

ರೋಗಿಗಳ ಆರೈಕೆಯಲ್ಲಿ ಅತ್ಯುತ್ತಮವಾಗಿ ತೊಡಗಿಕೊಂಡಿದ್ದ ನರ್ಸಿಂಗ್ ಸಿಬ್ಬಂದಿಗಳನ್ನು ಸತ್ಕರಿಸಲಾಯಿತು. ಡಾ. ಆರ್. ಬಿ.ನೇರ್ಲಿ , ಡಾ. ಆರಿಫ್ ಮಾಲ್ದಾರ, ಡಾ. ರಾಜೇಶ ಪವಾರ, ಡಾ. ವಿರೇಶ ನಂದಗಾವಿ ಉಪಸ್ಥಿತರಿದ್ದರು. ಆಸ್ಪತ್ರೆಯ ನರ್ಸಿಂಗ್ ಸೂಪರಿಟೆಂಡೆಂಟ್ ಶಕುಂತಲಾ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಲ್ವಿ ಮುಧೋಳ ಸ್ವಾಗತಿಸಿದರು. ಆಶಾರಾಣಿ ಪ್ರಾರ್ಥಿಸಿದರು.