ಬೆಂಗಳೂರು: ಪ್ರವಾಸಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರ ಅಂತರದಲ್ಲಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.
ಇದರೊಂದಿಗೆ ಎಲ್ಲ ಮೂರು ಮಾದರಿಗಳಲ್ಲೂ (ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20) ಅಗ್ರಪಟ್ಟ ಅಲಂಕರಿಸಿದೆ.
ಆಸ್ಟೇಲಿಯಾವನ್ನು ಹಿಂದಿಕ್ಕಿರುವ ರೋಹಿತ್ ಶರ್ಮಾ ಬಳಗ, ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ಈಗ 122 ರೇಟಿಂಗ್ ಪಾಯಿಂಟ್ ಹೊಂದಿದೆ. 117 ರೇಟಿಂಗ್ ಪಾಯಿಂಟ್ಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಭಾರತ ವಿರುದ್ಧದ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ (111 ರೇಟಿಂಗ್ ಪಾಯಿಂಟ್).
ಪ್ರಸ್ತುತ ಕ್ರೈಸ್ಟ್ಚರ್ಚ್ನಲ್ಲಿ ಸಾಗುತ್ತಿರುವ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಣ ಪಂದ್ಯದ ಫಲಿತಾಂಶ ಏನೇ ಬಂದರೂ ಭಾರತವೇ ಅಗ್ರಸ್ಥಾನದಲ್ಲಿ ಉಳಿದುಕೊಳ್ಳಲಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ಏಕದಿನ, ಟ್ವೆಂಟಿ-20ಯಲ್ಲೂ ಭಾರತವೇ ಟಾಪ್ :
ಏಕದಿನ ಹಾಗೂ ಟ್ವೆಂಟಿ-20 ರ್ಯಾಂಕಿಂಗ್ ಪಟ್ಟಿಯಲ್ಲೂ ಭಾರತವೇ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿದೆ. ಏಕದಿನದಲ್ಲಿ ಭಾರತ 121 ರೇಟಿಂಗ್ ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ (118 ರೇಟಿಂಗ್ ಪಾಯಿಂಟ್).
ಚುಟುಕು ಕ್ರಿಕೆಟ್ನಲ್ಲಿ ಭಾರತ 266 ರೇಟಿಂಗ್ ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ಎರಡು (256) ಹಾಗೂ ಆಸ್ಟ್ರೇಲಿಯಾ ಮೂರನೇ (255) ಸ್ಥಾನದಲ್ಲಿದೆ.