ಬೆಳಗಾವಿ: ಕರ್ನಾಟಕ-ಗೋವಾ-ಮಹಾರಾಷ್ಟ್ರ ರಾಜ್ಯಗಳಲ್ಲಿ ಕ್ರಿಮಿನಲ್‌ ಅಪರಾಧ ಎಸಗಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ವಿಶಾಲ ಸಿಂಗ್ ಚವ್ಹಾನ ಎಂಬುವವನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಒಂದು ಕೊಲೆ, ಐದು ಕೊಲೆ ಯತ್ನ, ಅಪಹರಣ, ಸುಲಿಗೆ, ಕಳ್ಳತನ, ದರೋಡೆ, ಅಕ್ರಮ ಆಯುಧ ಬಳಕೆ ಸೇರಿ ಹಲವು ಪ್ರಕರಣಗಳಲ್ಲಿ ಮೂರು ರಾಜ್ಯಗಳ ಪೊಲೀಸರಿಗೆ ಈತ ಬೇಕಾಗಿದ್ದ.
ಮೂಲತಃ ಕಿತ್ತೂರು ತಾಲೂಕು ಚಿಕ್ಕನಂದಿಹಳ್ಳಿ ಗ್ರಾಮದ ರೌಡಿ ವಿಶಾಲ ಸಿಂಗ್ ಚೌಹಾನ್(25) ಪ್ರಸ್ತುತ ಬೆಳಗಾವಿ ನಗರದ ಶಾಸ್ತ್ರಿ ನಗರದಲ್ಲಿ ವಾಸವಿದ್ದ.
ಬೆಳಗಾವಿ ನಗರದಿಂದ ಗಡಿ ಪಾರು ಆದೇಶ ಇದ್ದಾಗಲೂ ಅಕ್ರಮವಾಗಿ ಜಿಲ್ಲೆ ಪ್ರವೇಶಿಸಿ ವ್ಯಾಟ್ಸ್ ಆ್ಯಪ್, ಇನ್ಸ್ಟ್ರಾಗ್ರಾಮ ನಂತಹ ಆ್ಯಪ್ ಗಳ ಮೂಲಕ ಅಕ್ರಮ ಚಟುವಟಿಕೆ ನಡೆಸುತ್ತಿದ್ದ, ಖಡೇಬಜಾರ್ ಎಸಿಪಿ ಶಿಫಾರಸ್ಸು ಮೇರೆಗೆ ಸುದೀರ್ಘ ಕಾನೂನು ಪ್ರಕ್ರಿಯೆ ಮೂಲಕ ಈಗ ಅವನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ‌ ಇಂತಹುದೇ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಇನ್ನೂ ನಾಲ್ವರು ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸುಳಿವು ಡಿಸಿಪಿ ರೋಹನ್ ಜಗದೀಶ್ ನೀಡಿದ್ದಾರೆ. ವಿಶಾಲಸಿಂಗ್ ನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು ಇದು ವಿಶೇಷ ಪ್ರಕರಣವೆಂದು ಪೊಲೀಸ್ ಆಯುಕ್ತರ ಕಚೇರಿ ತಿಳಿಸಿದೆ.