ಮೈಸೂರು :
ಮೈಸೂರಲ್ಲಿ ಈ ಬಾರಿ ಹಾಲಿ ಸಂಸದ ಪ್ರತಾಪ ಸಿಂಹ ಅವರಿಗೆ ಮತ್ತೆ ಟಿಕೆಟ್ ಸಿಗುತ್ತಾದಾ ಎಂಬ ಚರ್ಚೆ ಇದೀಗ ಕಾವೇರಿದೆ.

ಜೆಡಿಎಸ್ ಜೊತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಆ ಕ್ಷೇತ್ರವನ್ನು ಮಾಜಿ ಸಚಿವ ಜೆಡಿಎಸ್ ನ ಸಾ.ರಾ.ಮಹೇಶ್ ಅವರಿಗೆ ನೀಡಲು ಚಿಂತನೆ ನಡೆಸಿರುವ ಕುರಿತು ಇದೀಗ ದೊಡ್ಡ ಚರ್ಚೆ ನಡೆದಿದೆ. ಜೆಡಿಎಸ್ ಈ ಕ್ಷೇತ್ರವನ್ನು ತನಗೆ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಸೂತ್ರ ಕಂಡು ಹುಡುಕಿದ್ದು ಅವರೇ ಸ್ವತಃ ಸಾ.ರಾ. ಮಹೇಶ್ ಹೆಸರಿಗೆ ಒಪ್ಪಿಗೆ ನೀಡಿದ್ದಾರೆ.

ಮಹೇಶ್ ಈ ಹಿಂದೆ ಬಿಜೆಪಿಯಲ್ಲಿ ಇದ್ದವರು. ಹಾಗಾಗಿ ಬಿಜೆಪಿ ವಲಯದಿಂದ ಹೆಚ್ಚಿನ ವಿರೋಧ ಬಾರದು ಎನ್ನುವ ಮಾತು ಕೇಳಿ ಬಂದಿದೆ.

ಬಿಜೆಪಿ ನಾಯಕರು ಕಮಲ ಚಿಹ್ನೆ ಮೇಲೆ ಸ್ಪರ್ಧಿಸುವಂತೆ ನನ್ನ ಜೊತೆ ಚರ್ಚಿಸಿದ್ದು ಕುಮಾರಸ್ವಾಮಿ ಹೇಳಿದಂತೆ ಕೇಳುತ್ತೇನೆ, ನನ್ನ ತಕರಾರು ಇಲ್ಲ ಎಂದು ಬಿಜೆಪಿಯವರಿಗೆ ತಿಳಿಸಿದ್ದೇನೆ, ಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ. ಆದರೆ ವರಿಷ್ಠರ ಸೂಚನೆ ಮೇರೆಗೆ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಇದೀಗ ಕೇಳಿ ಬಂದಿರುವ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಿರುವ ಹಾಲಿ ಸಂಸದ ಪ್ರತಾಪ ಸಿಂಹ, ಕ್ಷೇತ್ರದ ಜನರು ಮತ್ತು ಚಾಮುಂಡೇಶ್ವರಿ- ಕಾವೇರಿ ತಾಯಿಯ ಆಶೀರ್ವಾದ ನನ್ನ ಮೇಲಿದೆ. ಗಾಳಿ ಸುದ್ದಿಗಳಿಗೆ ತಲೆ ಕೆಡಿಸಿಕೊಳ್ಳದೆ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದೇನೆ ಎಂದು ತಿಳಿಸಿದ್ದಾರೆ.