ಬೆಂಗಳೂರು : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವಿದ್ಯಾರ್ಥಿ ಗಳ ಪ್ರವೇಶ ಪತ್ರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಶಾಲಾ ಲಾಗಿನ್ ಮೂಲಕ ಆಯಾ ಶಾಲಾ ಮುಖ್ಯೋಪಾಧ್ಯಾಯರು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಸೂಚಿಸಿದೆ.
ನಿಗದಿಯಂತೆ ಮಾ.25ರಿಂದ ಏ.6ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರವೇಶ ಪತ್ರಗಳಲ್ಲಿ ವಿದ್ಯಾರ್ಥಿಗಳ ಮಾಹಿತಿ ಸರಿಯಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿ ಕೊಳ್ಳಬೇಕು. ಯಾವುದೇ ವಿದ್ಯಾರ್ಥಿಯ ಮಾಹಿತಿ ತಪ್ಪಿದ್ದರೆ ಅಥವಾ ತಿದ್ದುಪಡಿಗಳು ಅಗತ್ಯವಿದ್ದರೆ ವಿದ್ಯಾರ್ಥಿಯ ಭಾವಚಿತ್ರ, ಸಹಿ ಮತ್ತು ಇತರೆ ತಿದ್ದುಪಡಿಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಮಂಡಳಿಗೆ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.
ವಿದ್ಯಾರ್ಥಿಯ ಭಾವಚಿತ್ರ ಬದಲಾವಣೆಗೆ ಸಂಬಂಧಿಸಿದಂತೆ ಪರೀಕ್ಷೆಗೆ ಪೂರ್ವದಲ್ಲಿ ಮಾಡಲಾದ ಬದಲಾವಣೆಗಳನ್ನು ಮಾತ್ರ ಮಂಡಳಿಯು ಪರಿಗಣಿಸುತ್ತದೆ. ನಂತರದ ಬದಲಾವಣೆಯ ಮನವಿಗಳನ್ನು ಮಂಡಳಿ ಪುರಸ್ಕರಿಸುವುದಿಲ್ಲ. ಪ್ರವೇಶ ಪತ್ರದ ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಸ್ಯಾಟ್ಸ್‌ನಲ್ಲಿ ತಿದ್ದುಪಡಿ ಮಾಡಿದ ನಂತರ ದಾಖಲೆಗಳೊಂದಿಗೆ 100 ರು. ದಂಡ ಶುಲ್ಕ ಹಾಗೂ ಮಾಧ್ಯಮ ಬದಲಾವಣೆ ಇದ್ದಲ್ಲಿ ತಿದ್ದುಪಡಿಗೆ 500 ರು. ದಂಡ ಶುಲ್ಕವನ್ನು ಮಾ.16ರ ಸಂಜೆ 5ರೊಳಗೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.