ಮಂಗಳೂರು : ತುಳುನಾಡಿನ ಪ್ರಾಚೀನ ಪರಂಪರೆಯ ದೈವಾರಾಧನೆಗೆ ಸಿನಿಮಾ ಮತ್ತು ನಾಟಕಗಳಲ್ಲಿ ಅವಮಾನ ಆಗುತ್ತಿದೆ. ಇದನ್ನು ತಡೆಯಲು ಜಿಲ್ಲೆಯ ದೈವಾರಾಧಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ದೈವಾರಾಧಕರ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್‌, ಭಜರಂಗದಳಗಳು ಬೆಂಬಲ ನೀಡಿವೆ.
ಕಾಂತಾರ ಸಿನಿಮಾದಲ್ಲಿ ದೈವದ ಅಣುಕು ವೇಷ ಹಾಕಿರುವ ರಿಷಬ್ ಶೆಟ್ಟಿ, ಶಿವದೂತೆ ಗುಳಿಗೆ ನಾಟಕದಲ್ಲಿ ದೈವದ ಅಣುಕು ವೇಷ ಹಾಕಿದ ಸ್ವರಾಜ್ ಹಾಗೂ ಕಾವೇರಿ ಧಾರಾವಾಹಿಯ ಸಿ.ಕೆ ಪ್ರಶಾಂತ್ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ.

ಕಾಂತಾರ ಸಿನಿಮಾ ಯಶಸ್ವಿ ನಂತರ ಟಿವಿ ಶೋಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ನಲ್ಲಿ ದೈವದ ವೇಷ ಹಾಕಿ ನಟಿಸುತ್ತಿರುವ ಸಂಖ್ಯೆ ಜಾಸ್ತಿ ಆಗಿದ್ದು, ಇದರಿಂದ ದೈವಕ್ಕೆ ಅಪಮಾನವಾಗುತ್ತಿದೆ. ಇನ್ನೂ ಮುಂದೆ ಟಿವಿ, ಸಿನೆಮಾ ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು. ಹಾಗೆ ಆದರೆ ಮುತ್ತಿಗೆ ಹಾಕುತ್ತೇವೆ. ಈ ಬಗ್ಗೆ ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡುತ್ತೇವೆ ಎಂದು ಭಜರಂಗದಳದ ಮುಖಂಡ ಶರಣ ಪಂಪ್ ವೆಲ್ ಎಚ್ಚರಿಕೆ ನೀಡಿದ್ದಾರೆ.
ಕಾಂತಾರ-2 ಚಿತ್ರ ತೆರೆಗೆ ಬರಲಿದ್ದು, ಆ ಚಿತ್ರದಲ್ಲಿ ದೈವಪ್ರದರ್ಶನದ ದೃಶ್ಯ ಇದ್ದರೆ ಹೋರಾಟ ಮಾಡಲಾಗುವುದು ಎಂದು ಭಜರಂಗದಳ ಎಚ್ಚರಿಕೆ ನೀಡಿದ್ದಾರೆ.