ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗೆ ಮುನ್ನ ಹಲವಾರು ವಸ್ತುಗಳನ್ನು ಮತದಾರರಿಗೆ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ. ಅದರಲ್ಲೂ ವ್ಯಾಪಕ ಪ್ರಮಾಣದಲ್ಲಿ ಕುಕ್ಕರ್ ಗಳನ್ನು ಹಂಚಲಾಗುತ್ತಿದೆ. ಈ ಬಗ್ಗೆ ಹದ್ದಿನ ಕಣ್ಣು ಇಟ್ಟಿರುವ ಆದಾಯ ತೆರಿಗೆ ಇಲಾಖೆ ಇದೀಗ ಖಚಿತ ದೂರಿನ ಮೇರೆಗೆ ಕುಕ್ಕರ್ ತಯಾರಿಸುವ ಕಂಪನಿಗೆ ನೋಟಿಸ್ ಜಾರಿ ಮಾಡಿರುವುದು ಕಂಪನಿಯ ಭವಿಷ್ಯಕ್ಕೆ ತೊಂದರೆಯನ್ನುಂಟು ಮಾಡಿದೆ.

ಮತದಾರರಿಗೆ ಆಮಿಷ ಒಡ್ಡಲು ರಾಜಕಾರಣಿಗಳಿಗೆ ಪ್ರೆಷರ್ ಕುಕ್ಕರ್ ಪೂರೈಸಿರುವ ಅನುಮಾನದ ಮೇಲೆ ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರೆಷರ್ ಕುಕ್ಕರ್ ತಯಾರಿಕಾ ಕಂಪನಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಈ ಕಂಪನಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏಳು ದಾಸ್ತಾನು ಕೇಂದ್ರಗಳನ್ನು ಹೊಂದಿದೆ. ಕೆಲವು ತಿಂಗಳುಗಳಿಂದ ತಯಾರಿಸಿರುವ ಕುಕ್ಕರ್‌ಗಳ ಸಂಖ್ಯೆ, ಸಗಟು ಖರೀದಿದಾರರ ವಿವರ ಒದಗಿಸುವಂತೆ ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಲಾಗಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಡಿ. ಕೆ.ಸುರೇಶ್, ಅವರ ಸಹೋದರ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತದಾರರಿಗೆ ಕುಕ್ಕರ್ ಹಂಚುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದು, ಕ್ರಮಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು. ಆಯೋಗದ ಸೂಚನೆಯಂತೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.