ಬೆಳಗಾವಿ: ಲವ್ ಜಿಹಾದ್ ಹೆಸರಲ್ಲಿ ಒಂದು ಗುಂಪಿಗೆ ತರಬೇತಿ ಕೊಟ್ಟಿದ್ದಾರೆ. ಇದು ಎನ್ಐಎ ತನಿಖೆ ಆಗುವ ಮೂಲಕ ಮತಾಂತರ ಗುಂಪನ್ನು ಹೊರ ಹಾಕುವ ಕೆಲಸ ಮಾಡಬೇಕು. ಎನ್‌ಐಎ ಕೂಡ ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ಇಲ್ಲಾ ಇನ್ನೂ ಐದು ಜನ ಆರೋಪಿ ಇದ್ದಾರೆ. ಆ ಐದು ಜನ ಆರೋಪಿಯನ್ನು ಕಾಂಗ್ರೆಸ್ ಸರ್ಕಾರ ಯಾವಾಗ ಅರೆಸ್ಟ್ ಮಾಡುತ್ತೀರಿ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ಮನವಳ್ಳಿಯಲ್ಲಿ ನಡೆಯುತ್ತಿದ್ದ ಬೃಹತ್ ಪ್ರತಿಭಟನೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ ಭಾಗವಹಿಸಿ, ಪ್ರತಿಭಟನಾಕಾರರಿಗೆ ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಘಟನೆ ರಾಕ್ಷಸಿ ಪ್ರವೃತ್ತಿಯ ಘಟನೆ ಆಗಿದೆ.‌ ಹಾಡಹಗಲೇ ಕಾಲೇಜಿನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯನ್ನು ಕೊಂದು ಹಾಕಿದ್ದು ಎಲ್ಲರೂ ಖಂಡಿಸಬೇಕು. ಮುನವಳ್ಳಿಯಲ್ಲಿನ ಪ್ರತಿಭಟನೆ ಬಿಸಿ ಇಡೀ ರಾಜ್ಯಕ್ಕೆ ಹೋಗುತ್ತಿದೆ. ದೆಹಲಿಯಲ್ಲಿ ಇದೇ ರೀತಿ ಘಟನೆ ನಡೆದಿತ್ತು, ಈಗ ಹುಬ್ಬಳ್ಳಿಯಲ್ಲಿ ನಡೆದಿದೆ. ಇಂಥದೊಂದು ಗುಂಪಿಗೆ ತರಬೇತಿ ನೀಡಲಾಗಿದೆಯಾ ಅನ್ನೋ ಅನುಮಾನ ಮುಡುತ್ತಿದೆ ಎಂದು ಅನುಮಾನ ವ್ಯಕ್ತ ಪಡಿಸಿದರು.‌
ಸಿಎಂ, ಡಿಸಿಎಂ ವೈಯಕ್ತಿಕ ಕಾರಣಕ್ಕೆ ಕೊಲೆ ಆಗಿದೆ ಅಂತಾರೆ. ಆದರೆ ಕಾಂಗ್ರೆಸ್ ಪಾಲಿಕೆ ಸದಸ್ಯನೇ ಹೇಳುವ ಪ್ರಕಾರ ಇದು ಲವ್ ಜಿಹಾದ್ ಕೇಸ್ ಆಗಿದೆ.‌ ಈ ವರೆಗೂ ಸಿಎಂ, ಡಿಸಿಎಂ, ಗೃಹಸಚಿವರು ಬಂದು ಯುವತಿ ಕುಟುಂಬಕ್ಕೆ ಸಾಂತ್ವಾನ ಯಾಕೆ ಹೇಳಿಲ್ಲ. ನೀವು ಒಂದು ಹೆಲಿಕಾಪ್ಟರ್ ತಗೊಂಡು ಹುಬ್ಬಳ್ಳಿಗೆ ಯಾಕೆ ಬರಲಿಲ್ಲ. ಅದೇ ಮುಸ್ಲಿಂ ಮಹಿಳಿಗೆ ಈ ರೀತಿ ಆಗಿದ್ರೆ ವಿಶೇಷ ವಿಮಾನ ತಗೊಂಡು ಬರುತ್ತಿದ್ದರಿ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲು ನಿಮಗೆ ಗಡ್ಸ್ ಇಲ್ವಾ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಗುಡುಗಿದರು.‌
ನಿಮ್ಮ ತುಷ್ಟಿಕರಣ ನೀತಿ ನಿಲ್ಲಿಸಿ, ಇಲ್ಲ ಜನ ನಿಮ್ಮನ್ನು ಅಟ್ಟಾಡಿಸಿ ಹೊಡೆಯುವ ಪರಿಸ್ಥಿತಿ ಬರುತ್ತೆ. ಕೇರಳದ ವಯನಾಡ್ ನಲ್ಲಿ ಮುಸ್ಲಿಮರು ಜಾಸ್ತಿ ಇರೋದಕ್ಕೆ ಅಲ್ಲಿಗೆ ಹೋಗಿ ರಾಹುಲ್ ಗಾಂಧಿ ಚುನಾವಣೆ ಸ್ಪರ್ಧೆ ಮಾಡುತ್ತಾರೆ. ರಾಜ್ಯದಲ್ಲಿ ಮಹಿಳೆಯರು ಸ್ಕೂಲ್, ಕಾಲೇಜಿಗೆ ಹೋಗುವ ಪರಿಸ್ಥಿತಿ ಉಳಿದಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ. ಇನ್ನೂಳಿದ ಐದು ಜನರನ್ನು ಅರೆಸ್ಟ್ ಮಾಡಿ ಎನ್ಕೌಂಟರ್ ಮಾಡುವ ಕೆಲಸ ಮಾಡಿ. ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೆ, ಆಗ ಹಿಂದು ಸಮಾಜಕ್ಕೆ ತೊಂದರೆ ಕೊಡುವ ಕೆಲಸ ನಡೆದಿದೆ. ಲವ್ ಜಿಹಾದ್ ಅನ್ನೋದು ನಿರಂತರವಾಗಿ ನಡೆಯುತ್ತಿದೆ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.‌
ಪ್ರತಿಭಟನೆ ನಡೆದ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಂಡಲ ಅಧ್ಯಕ್ಷ ಈರಣ್ಣ ಚಂದರಗಿ, ಪ್ರಮುಖರಾದ ಮಲ್ಲಣ್ಣ ಯಾದವಾಡ, ನರಸಿಂಹ ಕುಲಕರ್ಣಿ, ವಿಜಯ ಅವಟೆ, ಸುಭಾಷ ಗದ್ದಿಗೌಡ್ರ, ಪಂಚನಗೌಡ ದ್ಯಾಮಣ್ಣಗೌಡ್ರ, ಸೌರಭ ಚೋಪ್ರಾ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು