ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವರುಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿ. ನಾನು ಸಹಾ ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡುವೆ. ಇಬ್ಬರು ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯೋಣ. ಯಾರು ಗೆಲ್ಲುತ್ತಾರೋ ನೋಡೋಣ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಚಾಮುಂಡೇಶ್ವರಿ ಮತ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರು ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂಬ ಮುಖ್ಯಮಂತ್ರಿ ಅವರ ಹೇಳಿಕೆಗೆ ಸಿಡಿಮಿಡಿಗೊಂಡ ಜಿ.ಟಿ. ದೇವೇಗೌಡ ಅವರು ಇದೀಗ ಮುಖ್ಯಮಂತ್ರಿ ಅವರಿಗೆ ಈ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಅಭಿವೃದ್ಧಿ ಎಂದರೆ ಏನೆಂದು ಗೊತ್ತಿಲ್ಲ. ಅಭಿವೃದ್ಧಿ ಮಾಡದೆ ರಾಜಕೀಯದಲ್ಲಿ ಬೆಳೆದಿದ್ದಾರೆ ಎಂದರೆ ಅದು ಸಿದ್ದರಾಮಯ್ಯ ಮಾತ್ರ. ಮುಖ್ಯಮಂತ್ರಿಗಳು ಚಾಮುಂಡಿ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಚಾಮುಂಡೇಶ್ವರಿ ಉಪಚುನಾವಣೆ ವೇಳೆ ನಾನು ಜೆಡಿಎಸ್ ಪರ ಪ್ರಚಾರಕ್ಕೆ ಹೋಗಲಿಲ್ಲ. ಆಗ ಅವರು ಗೆಲುವು ಸಾಧಿಸಿದ್ದರು. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಎಷ್ಟೊಂದು ಪ್ರಯತ್ನ ಮಾಡಿದ್ದೀರಿ. ನನ್ನನ್ನು ಕಾಯುವುದಕ್ಕೆ ದೈವ ಇಲ್ವಾ ? ಧರ್ಮ ಇಲ್ವಾ ?ಅದ್ಹೇಗೆ ಸೋಲಿಸ್ತೀರಿ ನೀವು ನನ್ನ ಎಂದು ಅವರು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಮುಗಿದು ಹೋಯಿತು. ಪದೇ ಪದೇ ನನ್ನ ಬಗ್ಗೆ ಮಾತನಾಡುತ್ತೀರಿ. ಯಾವಾಗಲೂ ಮುಖ್ಯಮಂತ್ರಿಯಾಗಿಯೇ ಇರುತ್ತೇನೆ ಎಂದು ತಿಳಿದಿದ್ದೀರಾ ? ಎಷ್ಟು ದಿನಗಳ ಕಾಲ ಮುಖ್ಯಮಂತ್ರಿ ಆಗಿರುತ್ತೀರಿ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ನೋಡೋಣ ? ನಮಗೆ ನೋವು ಕೊಡುತ್ತಲೇ ಇದ್ದೀರಿ. ಪದೇ ಪದೇ ಬಂದು ಚುಚ್ಚು ಮಾತುಗಳನ್ನು ಆಡುತ್ತೀರಿ. ಮೌನವಾಗಿ ಮರ್ಯಾದೆಯಿಂದ ಇರಿ. 35,000 ಮತಗಳ ಅಂತರದಿಂದ ನಿಮ್ಮನ್ನು ಸೋಲಿಸಿದಾಗ ನಾನು ನಿಮ್ಮ ಬಗ್ಗೆ ಅಗೌರವದಿಂದ ಮಾತನಾಡಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಹಸೀಲ್ದಾರ್, ಬಿಇಒ ಮೊದಲಾದವರು ಮುಖ್ಯಮಂತ್ರಿಗಳ ಬಂಧುಗಳೇ ಇದ್ದಾರೆ. ನಾನು ಹೆಸರಿಗೆ ಮಾತ್ರ ಶಾಸಕ.ಕ ಚಾಮುಂಡೇಶ್ವರಿಯಲ್ಲಿ ಎಲ್ಲವೂ ನಿಮ್ಮದೇ. ಗುತ್ತಿಗೆದಾರರು, ಕಮಿಷನ್ ಅನ್ನು ನಿಮ್ಮ ಮಗನಿಗೆ ಕೊಡಬೇಕು. ಯತೀಂದ್ರ ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲಿ ಕಮಿಷನ್ ಪಡೆಯುತ್ತಿದ್ದಾರೆ. 60%ಕಮಿಷನ್ ಸರಕಾರ ನಿಮ್ಮದು ಎಂದು ಅವರು ವಾಗ್ದಾಳಿ ನಡೆಸಿದರು.