ಭೋಪಾಲ್ : ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ಮತ್ತೊಂದು ಆಘಾತ. ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ ಪಚೌರಿ, ಮಾಜಿ ಸಂಸದ ಗಜೇಂದ್ರ ಸಿಂಗ್ ರಾಜುಖೇಡಿ ಮತ್ತು ಪಕ್ಷದ ಮಾಜಿ ಶಾಸಕರು ಸೇರಿದಂತೆ ಹಲವಾರು ನಾಯಕರು ಶನಿವಾರ ಭೋಪಾಲ್ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ ಯಾದವ್, ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ. ಶರ್ಮಾ ಮತ್ತು ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಅವರ ಸಮ್ಮುಖದಲ್ಲಿ ಸುರೇಶ ಪಚೌರಿ, ರಾಜುಖೇಡಿ ಮತ್ತು ಇತರ ನಾಯಕರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಶನಿವಾರ ಬೆಳಿಗ್ಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಶಾಸಕರಾದ ಸಂಜಯ ಶುಕ್ಲಾ, ಅರ್ಜುನ್ ಪಾಲಯ್ಯ, ವಿಶಾಲ್ ಪಟೇಲ್ ಸೇರ್ಪಡೆಯಾದ ನಾಯಕರಲ್ಲಿ ಸೇರಿದ್ದಾರೆ.
ಸೋನಿಯಾ ಗಾಂಧಿ ಕುಟುಂಬಕ್ಕೆ ನಿಕಟವಾಗಿದ್ದ ಪಚೌರಿ ಅವರು ಕೇಂದ್ರ ರಕ್ಷಣಾ (ರಕ್ಷಣಾ ಉತ್ಪಾದನೆ ಮತ್ತು ಸರಬರಾಜು) ರಾಜ್ಯ ಸಚಿವರಾಗಿದ್ದರು ಮತ್ತು ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪಚೌರಿ ಅವರು ಈ ಹಿಂದೆ ಕಾಂಗ್ರೆಸ್ನಲ್ಲಿ ಪಕ್ಷದ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಹುದ್ದೆ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಮೊದಲು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು.
1998, 1999 ಮತ್ತು 2009 ರ ಮೂರು ಅವಧಿಗೆ ಕಾಂಗ್ರೆಸ್ ಟಿಕೆಟ್ನಲ್ಲಿ ಧಾರ್ (ಪರಿಶಿಷ್ಟ ಬುಡಕಟ್ಟುಗಳು) ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾದ ರಾಜುಖೇಡಿ ಅವರು ಪ್ರಮುಖ ಬುಡಕಟ್ಟು ನಾಯಕರಾಗಿದ್ದಾರೆ. ಕಾಂಗ್ರೆಸ್ಗೆ ಸೇರುವ ಮೊದಲು ಅವರು 1990 ರಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು.