ದೆಹಲಿ : ಪ್ರಖ್ಯಾತ ನಟಿ ಮತ್ತು ಸಂಸದ ಹೇಮಮಾಲಿನಿ ಉತ್ತರ ಪ್ರದೇಶದ ಮಥುರಾದಿಂದ ಮೂರನೇ ಬಾರಿ ಸ್ಪರ್ಧೆ ಮಾಡಲಿದ್ದಾರೆ. ಕೊನೆಗೂ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ
ಲೋಕಸಭೆ ಚುನಾವಣೆ ಅಖಾಡಕ್ಕೆ ಹೇಮಾಮಾಲಿನಿ ಪುನಃ ಎಂಟ್ರಿ ಕೊಟ್ಟಿದ್ದಾರೆ.
1999ರಿಂದ ಹೇಮಾ ಮಾಲಿನಿ ರಾಜಕೀಯದಲ್ಲಿ ಗುರುತಿಸಿಕೊಂಡವರು. ಆರಂಭದಲ್ಲಿ ಅಂದಿನ ಬಾಲಿವುಡ್ ಸೂಪರ್ ಸ್ಟಾರ್ ವಿನೋದ್ ಖನ್ನಾ ಪರವಾಗಿ ಪ್ರಚಾರ ಮಾಡಿದ್ದರು. 2004ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದರು. 10 ವರ್ಷಗಳ ಬಳಿಕ ಅಂದರೆ 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರನ್ನು ಸೋಲಿಸಿ ಮಥುರಾದಲ್ಲಿ ಗೆದ್ದು ಬೀಗಿದ್ದರು. ಇದೀಗ ಇದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಮಥುರಾದಿಂದ ಮಾತ್ರ ಸ್ಪರ್ಧಿಸುತ್ತೇನೆ ಹೊರತು ಬೇರೆ ಯಾವುದೇ ಕ್ಷೇತ್ರದಿಂದಲ್ಲ ಎಂದು ಈ ಹಿಂದೆಯೇ ಹೇಳಿದ್ದರು. ಅದರಂತೆಯೇ ಅವರ ಹೆಸರು ಬಿಡುಗಡೆ ಆಗಿದೆ. ಮಥುರಾದಿಂದ ಮಾತ್ರ ಸ್ಪರ್ಧಿಸುವ ತನ್ನ ನಿರ್ಧಾರವನ್ನು ವಿವರಿಸಿದ ಅವರು, ಭಗವಾನ್ ಕೃಷ್ಣ ಮತ್ತು ಆತನ ಭಕ್ತರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದೇನೆ ಮತ್ತು ಅವರ ಸೇವೆಯನ್ನು
ಮಾಡಲು ಬಯಸುತ್ತೇನೆ ಎಂದು ಹೇಳಿದ್ದರು.
ಆದರೆ ಇದೀಗ ನಟಿ ಕಂಗನಾ ರಣಾವತ್ ಅವರ ಬಗ್ಗೆ ಚರ್ಚೆ ಶುರುವಾಗಿದೆ. ಏಕೆಂದರೆ 197 ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ಕಂಗನಾ ಅವರ ಹೆಸರು ಇಲ್ಲ. ತೇಜಸ್ ಚಿತ್ರದ ಬಿಡುಗಡೆಯ ನಂತರ ಗುಜರಾತ್ನ ದ್ವಾರಕಾದ ಜಗತ್ ಮಂದಿರಕ್ಕೆ ತೆರಳಿದ್ದ ನಟಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದರು.
ಮುಂದಿನ ದಿನಗಳಲ್ಲಿ ಶ್ರೀಕೃಷ್ಣನ ಆಶೀರ್ವಾದವಿದ್ದರೆ ನಾನೂ ಕೂಡ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದರು. ಬಳಿಕ ನಟಿ ಹಿಮಾಚಲ ಪ್ರದೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಭೇಟಿ ನೀಡಿದ್ದರು. ಈ ಸಭೆಯ ನಂತರ, ಆಕೆಯ ತಂದೆ ಅಮರ್ದೀಪ್ ರಣಾವತ್ ಸ್ವತಃ ಇದನ್ನು ಖಚಿತಪಡಿಸಿದ್ದರು. 2024 ರ ಲೋಕಸಭೆ ಚುನಾವಣೆಯಲ್ಲಿ ಕಂಗನಾ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು.
ರಾಜಕೀಯಕ್ಕೆ ಹೇಳಿ ಮಾಡಿಸಿದಂತಿರುವ ಕಂಗನಾ, ಇದೀಗ ಇಂದಿರಾಗಾಂಧಿ ರೋಲ್ನಲ್ಲಿ ಮಿಂಚುತ್ತಿರುವ ನಡುವೆಯೇ ‘ನೀವು ದೇಶದ ಪ್ರಧಾನಿಯಾಗಲು ಇಷ್ಟಪಡುತ್ತೀರಾ?’ ಎಂಬ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ನಟಿ ಜೋರಾಗಿ ನಗುತ್ತಲೇ, ಇತ್ತೀಚೆಗಷ್ಟೇ ಎಮರ್ಜೆನ್ಸಿ ಸಿನಿಮಾದಲ್ಲಿ ಇಂದಿರಾಗಾಂಧಿ ರೋಲ್ ಮಾಡಿದ್ದೇನೆ. ಇನ್ನೇನು ಅದು ಬಿಡುಗಡೆಯಾಗಲಿದೆ. ಅದನ್ನು ನೋಡಿದ ನಂತರ ನಾನು ಪ್ರಧಾನಿಯಾಗುವುದು ಯಾರಿಗೂ ಇಷ್ಟವಾಗುವುದಿಲ್ಲ ಎಂದು ತಮಾಷೆಯಾಗಿ ಹೇಳುತ್ತಲೇ ಜೋರಾಗಿ ನಕ್ಕಿದ್ದರು. ಇದೀಗ ಮೊದಲ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವುದರಿಂದ ಎರಡನೆಯ ಪಟ್ಟಿಯಲ್ಲಿ ಹೆಸರು ಪ್ರಕಟವಾಗಬಹುದು ಎನ್ನುವ ಕಾತರ ಎಲ್ಲರಲ್ಲೂ ಮೂಡಿದೆ.