ಕನಕಗಿರಿ : ಕನಕಗಿರಿ ಉತ್ಸವ-2024ರ ಅಂಗವಾಗಿ ಕನಕಗಿರಿಯ ಕಲ್ಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹೊಸ ಬಿಲ್ಡಿಂಗ್ ಆವರಣದಲ್ಲಿ ಬುಧವಾರ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದಾವಳಿ ಅಂತಿಮ ಸ್ಪರ್ಧೆ ಕೊನೆಯ ಕ್ಷಣದವರೆಗೂ ರೋಚಕತೆಯನ್ನು ಕಾಯ್ದುಕೊಂಡಿತು.
74 ಕೆಜಿ ಮೇಲ್ಪಟ್ಟ ಪುರುಷ ವಿಭಾಗದ ಈ ಸ್ಪರ್ಧೆಯು ತುಂಬಾ ರೋಮಾಂಚನದಿಂದ ಕೂಡಿತ್ತು. ಬೃಹತ್ ಕುಸ್ತಿ ಅಖಾಡದಲ್ಲಿ ಮದಗಜಗಳಂತೆ ಕುಸ್ತಿಪಟುಗಳು ಸೆಣಸಾಡಿದರು.
ಅಂತಿಮವಾಗಿ ಬೆಳಗಾವಿಯ ಕಾಮೇಶ್ ಪಾಟೀಲ “ಕನಕಗಿರಿ ಕೇಸರಿ” ಪಟ್ಟವನ್ನು ತಮ್ಮದಾಗಿಸಿಕೊಂಡರು. ಹಳಿಯಾಳದ ಮಂಜುನಾಥ ಗೌಡಪ್ಪನವರ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕನಕಗಿರಿ ಕೇಸರಿ ಪ್ರಶಸ್ತಿ ಒಂದು ಬೆಳ್ಳಿಯ ಗಧೆ, 15,000 ನಗದು ಬಹುಮಾನ ಹಾಗೂ ಪದಕವನ್ನು ಒಳಗೊಂಡಿದೆ.
ಪುರುಷರ ಕುಸ್ತಿ ಸ್ಪರ್ಧೆ ಫಲಿತಾಂಶ: 74 ಕೆಜಿ ಪುರುಷ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ದಾವಣಗೆರೆಯ ಯೋಗೇಶ “ಕನಕಗಿರಿ ಕುಮಾರ” ಪ್ರಶಸ್ತಿ ಪಡೆದರೆ, ಬಾಗಲಕೋಟೆಯ ಅಲ್ತಾಫ್ ಕರ್ಜಗಿ ದ್ವಿತೀಯ ಸ್ಥಾನ ಪಡೆದರು. 61 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಹಳಿಯಾಳದ ರೋಹನ್ “ಕನಕಗಿರಿ ಕಿಶೋರ್” ಪ್ರಶಸ್ತಿ ಪಡೆದರೆ, ಮಾಳಪ್ಪ ಹಾತರಕಿ ದ್ವಿತೀಯ ಸ್ಥಾನ ಪಡೆದರು.
ಪುರುಷ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಒಟ್ಟು 80 ಕುಸ್ತಿಪಟುಗಳು ಭಾಗವಹಿಸಿದ್ದರು.