ಹುಬ್ಬಳ್ಳಿ :
1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿ ಬಂಧಿತರಾಗಿದ್ದ ಹಿಂದೂ ಪರ ಕಾರ್ಯಕರ್ತ, ಕರಸೇವಕ ಶ್ರೀಕಾಂತ ಪೂಜಾರಿ ಅವರಿಗೆ ಶುಕ್ರವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಶನಿವಾರ ಅವರು ಜೈಲಿನಿಂದಲೂ ಬಿಡುಗಡೆಗೊಂಡಿದ್ದಾರೆ.

ಡಿಸೆಂಬರ್ 29ರಂದು ಹುಬ್ಬಳ್ಳಿ ಶಹರ ಪೊಲೀಸರು ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಿದ್ದರು. 31 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣವನ್ನು ಮತ್ತೆ ಓಪನ್ ಮಾಡಿ ಅಯೋಧ್ಯೆ ರಾಮ ಮಂದಿರ ಕರ ಸೇವಕನನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದೀಗ ಹುಬ್ಬಳ್ಳಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶ್ರೀಕಾಂತ ಪೂಜಾರಿ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಶ್ರೀಕಾಂತ ಪೂಜಾರಿ ಅವರ ಬಂಧನ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಡಿಸೆಂಬರ್ 29ರಂದು ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿತ್ತು. ಇದು ಭಾರಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. ಬಿಜೆಪಿಯಿಂದ “ನಾನು ಕರಸೇವಕ, ನನ್ನನ್ನೂ ಬಂಧಿಸಿ” ಅಭಿಯಾನ ಹಾಗೂ ಪ್ರತಿಭಟನೆಗಳು ನಡೆದಿವೆ. ಇದೆಲ್ಲದರ ನಡುವೆ ಪ್ರಕರಣದ ವಿಚಾರಣೆ ನಡೆಸಿದ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು.

 

ಅಯೋಧ್ಯೆಗೆ ಹೋಗುತ್ತೇನೆ ಎಂದ ಶ್ರೀಕಾಂತ್‌ ಪೂಜಾರಿ
ಶ್ರೀಕಾಂತ್‌ ಪೂಜಾರಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಶನಿವಾರ ಜೈಲಿನ ಎದುರು ಹಿಂದು ಕಾರ್ಯಕರ್ತರು ಭಾರಿ ಸಂಭ್ರಮಾಚರಣೆ ನಡೆಸಿದರು. ಈ ಹೊತ್ತಿನಲ್ಲಿ ಮಾತನಾಡಿದ ಶ್ರೀಕಾಂತ್‌ ಪೂಜಾರಿ ಅವರು ನಾನು ಯಾವುದೇ ತಪ್ಪು ಮಾಡಿಲ್ಲ ಎಂದರು. ಜತೆಗೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಅಯೋಧ್ಯೆಗೆ ತೆರಳುವುದಾಗಿ ತಿಳಿಸಿದರು.

ಏನಿದು ಪ್ರಕರಣ?
ಕರಸೇವೆಗೂ ಮುನ್ನ ಅಂದರೆ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಆಗ ಹಜರೇಸಾಬ್‌ ಮಲಿಕ್‌ಸಾಬ್‌ ಅಂಗಡಿ ಎಂಬುವವರು ದೂರು ಸಲ್ಲಿಸಿದ್ದರು. ಆ ದೂರಿನ ಅನ್ವಯ ಮೂರನೇ ಆರೋಪಿಯಾಗಿರುವ ಶ್ರೀಕಾಂತ್‌ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 436, 427 ಹಾಗೂ 149 ಅಡಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು.