ಬೆಳಗಾವಿ :
ಹನ್ನೆರಡನೆಯ ಶತಮಾನದ ಶರಣರು ಜಗತ್ತಿಗೆ ನೀಡಿರುವ ಮಹತ್ವದ ಕೊಡುಗೆಗಳು ಕಾಯಕ-ದಾಸೋಹ-ಪ್ರಸಾದ ಸಿದ್ಧಾಂತಗಳು. ಪ್ರತಿಯೊಬ್ಬ ವ್ಯಕ್ತಿಯು ಸತ್ಯ ಶುದ್ಧ ಹಾಗೂ ಪ್ರಾಮಾಣಿಕವಾಗಿ ದುಡಿದು ಸಮಾಜಮುಖಿಯಾಗಿ ಬದುಕಬೇಕೆಂದು ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ನುಡಿದರು.
ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು.
ಸಮಾಜದ ಬೆಳವಣಿಗೆಯಲ್ಲಿ ದುಡಿಮೆಯ ಅವಶ್ಯಕತೆ ಇದೆ. ಕಷ್ಟಪಟ್ಟು ದುಡಿದಾಗ ವ್ಯಕ್ತಿ ಕಲ್ಯಾಣವು ಸಾಧ್ಯ, ಸಮಾಜದ ಕಲ್ಯಾಣವು ಸಾಧ್ಯ. ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಹಾಗೂ ಸೇವಾಭಾವನೆ ಇರಬೇಕು. ನೆಪಕ್ಕೆ ಮಾಡಿದ ಕೆಲಸ ಕಾಯಕವಾಗಲಾರದು. ಕಾಯಕದ ಸಾರ್ಥಕತೆ ಇರುವುದು ದಾಸೋಹದಲ್ಲಿ ನಿರಂಭಾವದಿಂದ ಸಮಾಜಕ್ಕೆ ನಾವು ಗಳಿಸಿದ ಸೊತ್ತನ್ನು ಅರ್ಪಿಸಬೇಕು. ಇಂದು ನಾವೆಲ್ಲ ವ್ಯಕ್ತಿನಿಷ್ಠವಾಗಿ ಬದುಕುತ್ತಿದ್ದೇವೆ. ಸಮಾಜನಿಷ್ಠವಾಗಿ ಸಮಾಜದ-ಧರ್ಮದ ಋಣವನ್ನು ತೀರಿಸಬೇಕಾಗಿದೆ. ಹಣಗಳಿಕೆವೊಂದೇ ಜೀವನವಲ್ಲ. ಅದು ಸದ್ಮಾರ್ಗದಲ್ಲಿ ಸವೆಯುವಂತಾಬೇಕೆಂದು ತಿಳಿ ಹೇಳಿದರು.
‘ಕಾಯಕ-ದಾಸೋಹ’ ಕುರಿತು ಉಪನ್ಯಾಸವನ್ನು ನೀಡಿದ ಲಿಂಗರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಹೇಶ ಗುರನಗೌಡರ ‘ಶರಣರು ಕಾಯಕಕ್ಕೆ ದೈವೀಸ್ಪರ್ಶವನ್ನು ನೀಡಿದರು. ಕಾಯಕ ಆರ್ಥಿಕತೆಯ ತಳಹದಿ, ಬೆನ್ನೆಲುಬು. ಸಾಧಕ ಎಂಬ ಭಾವದಿಂದ ಕೈಗೊಳ್ಳುವ ಆತ್ಮಕ್ರಿಯೆ; ಪರಹಿತಕ್ಕಾಗಿ ಮಾಡುವ ಶಿವಕೇಂದ್ರಿ ಕ್ರಿಯೆ ಕಾಯಕ. ಶರಣರು ಕಾಯಕಕ್ಕೆ ಆಧ್ಯಾತ್ಮಿಕ ಅರ್ಥವನ್ನು ಕಲ್ಪಿಸಿದರು. ಪ್ರತಿಯೊಬ್ಬರು ತಮ್ಮ ಜೀವನ ನಿರ್ವಹಣೆಗಾಗಿ ಉದ್ಯೋಗವನ್ನು ಕೈಗೊಳ್ಳಬೇಕು. ತಾನು ಕೈಕೊಂಡ ಕೆಲಸ ಸಮಾಜಕ್ಕೆ ಹಾನಿಕಾರಕವಾಗಿರಬಾರದು. ಸಮಾಜದ ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅದರ ಫಲ ನನಗೆ ಮಾತ್ರವಲ್ಲದೆ ಸಮಾಜಕ್ಕೂ ದೊರೆಯಬೇಕು. ಈ ನಿರ್ಲಿಪ್ತ ಭಾವದಿಂದ ಮಾಡಿದ ಕೆಲಸ ಕಾಯಕವಾಗುತ್ತದೆ. ಶರಣರು ಕರ್ಮವಾದದಲ್ಲಿ ಜನ್ಮಾಂತರ ರಹಸ್ಯವನ್ನು ಖಂಡಿಸಿದರು. ವೃತ್ತಿ ಹುಟ್ಟಿನೊಂದಿಗೆ ಬರುವಂತಹದಲ್ಲ, ಅದು ನಮ್ಮ ಆಯ್ಕೆಯಲ್ಲಿದೆ ಎಂದರು. ಕರ್ಮಯೋಗಕ್ಕಿಂತ ಕಾಯಕಯೋಗಕ್ಕೆ ಆದ್ಯತೆ ನೀಡಿದರು. ಕಾಯಕ ಸಂಗ್ರಹ ಪ್ರವೃತ್ತಿಯನ್ನು ವಿರೋಧಿಸುತ್ತದೆ. ಶರಣರು ಎಲ್ಲಿಯೂ ಸಂಪತ್ತನ್ನು ಗಳಸಬೇಡಿ ಎಂದಿಲ್ಲ, ಅದನ್ನು ಮಡಗದಿರಿ ಎಂದಿದ್ದಾರೆ. ನಮ್ಮ ಪರಿಶ್ರಮದ ಫಲ ಸಮಾಜಕ್ಕೆ ವಿನಿಯೋಗವಾಗಬೇಕು. ಲಿಂಗರಾಜರಂತಹ ಅನೇಕ ಪುಣ್ಯಪುರುಷರು ತಮ್ಮ ದಾನವನ್ನು ದಾಸೋಹವನ್ನಾಗಿ ಮಾಡಿದರು. ದಾಸೋಹ ಎಂದರೆ ನಿರಂಭಾವದಿಂದ ಸರ್ವಸ್ವವನ್ನೂ ಅರ್ಪಿಸುವ ಭಾವ. ಭಗವಂತ ನೀಡಿದ್ದು ದಾನ, ಅದನ್ನು ಸಮಾಜಕ್ಕೆ ದಾಸೋಹಂಭಾವದಿಂದ ಸಮರ್ಪಿಸಬೇಕಾಗಿದೆ ಎಂದು ಅದರ ಮಹತ್ವವನ್ನು ತಿಳಿಸಿದರು.
ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಶರಣರ ವಿಚಾರಗಳು ಎಲ್ಲ ಕಾಲಕ್ಕೂ ಹೃದಯಸ್ಪರ್ಶಿ ಹಾಗೂ ಅನುಕರಣೀಯವೆನಿಸಿವೆ. ಅವುಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳುವುದು ಮುಖ್ಯ. ನಮ್ಮ ಯುವಜನಾಂಗಕ್ಕೆ ಅವುಗಳನ್ನು ಮುಟ್ಟಿಸುವ ಗುರುತರ ಜವಾಬ್ದಾರಿ ನಮ್ಮದಾಗಿದೆ. ನಮ್ಮ ಮಕ್ಕಳಲ್ಲಿ ದುಡಿಯುವ ಪ್ರವೃತ್ತಿಯನ್ನು ರೂಢಿಸಿದ್ದಾದರೆ ದೇಶದಲ್ಲಿ ಉದ್ಯೋಗದ ಸಮಸ್ಯೆ ಇರುವುದಿಲ್ಲ. ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಡಾ.ಎಫ್.ವಿ.ಮಾನ್ವಿ, ರಮೇಶ ಕಳಸಣ್ಣವರ, ನ್ಯಾಯವಾದಿ ವಿ.ಕೆ.ಪಾಟೀಲ, ಸುಧಾ ಪಾಟೀಲ, ಡಾ.ಗುರುದೇವಿ ಹುಲೆಪ್ಪನವರಮಠ, ನೀಲಗಂಗಾ ಚರಂತಿಮಠ, ಶಂಕರ ಚೊಣ್ಣದ, ಜಯಶೀಲಾ ಬ್ಯಾಕೋಡ ಉಪಸ್ಥಿತರಿದ್ದರು. ಸುಜಾತಾ ಮಠಪತಿ ವಚನ ಪ್ರಾರ್ಥನೆ ಸಲ್ಲಿಸಿದರು. ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು. ಜ್ಯೋತಿ ಮಾಳಿ ವಚನ ವಿಶ್ಲೇಷಣೆ ಮಾಡಿದರು. ಶೈಲಾ ಸಂಸುದ್ದಿ ಪರಿಚಯಿಸಿದರು. ಕವಿತಾ ವಳಸಂಗ ವಂದಿಸಿದರು. ಗೀತಾ ಗುಂಡಕಲ್ಲೆ ನಿರೂಪಿಸಿದರು.