ಆರ್ಡಿ : ಆರ್ಡಿ ಸಮೀಪದ ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ, ಮಹಾಗಣಪತಿ ದೇವಳದ ವಾರ್ಷಿಕ ಕೆಂಡಸೇವೆ, ಜಾತ್ರಾ ಮಹೋತ್ಸವವು ಫೆ.26 ರಂದು ನಡೆಯಲಿದೆ.
ಶ್ರೀಕ್ಷೇತ್ರವು ಸಪರಿವಾರದೊಂದಿಗೆ ಕಾರಣಿಕದ ಅಪಾರ ಮಹಿಮೆಯಿಂದ ನಂಬಿದ ಭಕ್ತಾದಿಗಳ ಇಷ್ಟಾರ್ಥಗಳನ್ನು
ಕರುಣಿಸುವ ಪುಣ್ಯ ಕ್ಷೇತ್ರವಾಗಿ ಜನಾಕರ್ಷಣೆಯ ಕೇಂದ್ರವಾಗಿದೆ. 2005 ರಲ್ಲಿ ಜೀರ್ಣೋದ್ಧಾರದೊಂದಿಗೆ ಪುನರ್ ಪ್ರತಿಷ್ಠಾಪನೆಗೊಂಡಿದೆ.
ಕ್ಷೇತ್ರ ಮಹಿಮೆ: ತ್ರಿಮೂರ್ತಿಗೊಲಿದ ಆದಿಶಕ್ತಿಯು ವಲ್ಮೀಕ(ಹುತ್ತ) ರೂಪದಲ್ಲಿ ನೆಲೆಯಾಗಿರುವುದು ಇಲ್ಲಿನ ವಿಶಿಷ್ಟ. ಓಂಕಾರನಾದ ಪ್ರಿಯಳಾದ ಮೂಲ ದುರ್ಗೆಯು
ಶಂಖ, ಚಕ್ರ,ಡಮರು, ಧ್ಯಾನ ಮುದ್ರೆಯ ಕರಗಳನ್ನು ಹೊಂದಿರುವ ಸಾಲಿಗ್ರಾಮ ಶಿಲೆಯ ಸುಂದರ ವಿಗ್ರಹ
ಶ್ರೀ ಕ್ಷೇತ್ರದಲ್ಲಿ ಕಂಗೊಳಿಸುತ್ತಿದೆ. ಮೂಲ ವಿಗ್ರಹ
ಅಂಡಾಕಾರದಲ್ಲಿದ್ದು,ಶ್ರೀದೇವಿಯ ಜಲಶಾಯಿಯಾಗಿದ್ದು, ಧ್ಯಾನಸಕ್ತಳಾಗಿರುತ್ತಾಳೆ.
ವಲ್ಮೀಕ (ಹುತ್ತ)ದಲ್ಲಿ ನಾಗ ಮತ್ತು ಶ್ರೀ ದುರ್ಗಾಪರಮೇಶ್ವರಿ ಸಾನ್ನಿಧ್ಯ ಒಂದಾಗಿರುವುದು ಹಾಗೂ ನೆಲದಿಂದ ಸುಮಾರು 18 ಅಡಿ ಎತ್ತರಕ್ಕೆ ಬೆಳೆದಿರುವುದು ಇಲ್ಲಿನ ವಿಶೇಷತೆ. ಕ್ಷೇತ್ರವು
ಸಪರಿವಾರದೊಂದಿಗೆ ಶ್ರೀ ಮಹಾಗಣಪತಿ ಸಾನ್ನಿಧ್ಯವನ್ನು ಹೊಂದಿದೆ.
ಸಾನ್ನಿಧ್ಯದಲ್ಲಿ ಈ ಹಿಂದೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಬ್ರಹ್ಮ,ವಿಷ್ಣು,
ಮಹೇಶ್ವರರು ಶಿವ ಶಕ್ತಿ ಸಂಕಲ್ಪ
ಮಾಡಿಕೊಂಡು ಆರಾಧಿಸಿದ ದೇವ ನಿರ್ಮಿತ ಸಾಲಿಗ್ರಾಮ ಶಿಲಾ ವಿಗ್ರಹ ಇದಾಗಿದೆ. ಸಾವಿರಾರು ವರ್ಷಗಳ ಹಿಂದೆ ಯುದ್ಧ ಭೂಮಿಯಾಗಿತ್ತೆಂದು ಪ್ರತೀತಿಯಿದೆ. ಪುರಾತನ ಕಾಲದಲ್ಲಿ ಈ ಭಾಗವು ಘೋರಾರಣ್ಯದಿಂದ ಅವೃತ್ತವಾಗಿ, ಗಜ ಗಾತ್ರದ
ಹುಲಿಗಳು ದೇವಸ್ಥಾನದ ಪ್ರಕಾರದೊಳಗೆ ಪೂಜಾ
ಸಮಯದಲ್ಲಿಯೂ ಸಂಚರಿಸುತ್ತಿರುವುದಾಗಿಯೂ,ಪೂಜಾ ಸಮಯದಲ್ಲಿ ನಾಗದೇವರು ಹೆಡೆ ಬಿಚ್ಚಿ ನಿಲ್ಲುವ
ಕಾರಣಿಕದ ಸ್ಥಳವಾಗಿದೆ ಎನ್ನುವುದು ಹಿರಿಯರ ಅನಿಸಿಕೆ.
ಶ್ರೀದೇವಿಯ ಕ್ಷೇತ್ರಕ್ಕೆ ಬಂದಂತಹ ಭಕ್ತಾದಿಗಳು
ಇಂತಹ ಸನ್ನಿವೇಷವನ್ನು ನೋಡಿ ಹೆದರುತ್ತಾರೆ ಎಂದು
ಅರ್ಚಕರು ಹೇಳಿದ ನಂತರದ ದಿನಗಳಲ್ಲಿ ಹುಲಿಗಳು
ಗೋಚರಿಸುವುದು ಕಡಿಮೆಯಾಗಿದೆ. ಭಜನಾ ಸಮಯದಲ್ಲಿ ದೇವರಿಗೆ ಕಲಶದ ಮೇಲಿಟ್ಟ ಸಿಂಗಾರದ ಹೂವಿನ ಕ್ಷಿಪ್ರ ಪ್ರಸಾದವನ್ನು ತಡೆಯಲು ಕಟ್ಟಿದ ನೂಲನ್ನು ಹರಿದು ಪ್ರಸಾದ ನೀಡಿದ ವಿಶಿಷ್ಠ ಘಟನೆ ಇಲ್ಲಿ ನಡೆದಿದೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ದೇವಿಯ ಮೂಲ ವಿಗ್ರಹದಲ್ಲಿ ತಲೆಯ
ಜಡೆಯ ಮಧ್ಯೆ ಕೊಡದ ಆಕೃತಿಯನ್ನು ಹೊಂದಿದೆ.
ಇದನ್ನು ಗಮನಿಸಿದ ಪರ‍್ವಿಕರು ಜಡೆಯ ಮಧ್ಯೆ
ಕೊಡವಿರುವುದರಿಂದ ” ಕೊಡ ಜಡೆ “ಎಂದು ಕರೆದಿರಬಹುವುದು. ಕಾಲಕ್ರಮೇಣ ” ಕೊಂಜಾಡಿ” ಎಂದು ಕರೆಯಲ್ಪಟ್ಟಿದೆ.
ದೇವಳದಿಂದ ಒಂದು ಕಿ.ಮೀ ದೂರದಲ್ಲಿ ನದಿ ದಡದಲ್ಲಿ
ಕುದುರೆ ಬ್ರಹ್ಮನ ಸಾನ್ನಿಧ್ಯವಿದೆ. ಶ್ರೀಕ್ಷೇತ್ರಕ್ಕೂ ಕುದುರೆ
ಬ್ರಹ್ಮನ ಸಾನ್ನಿಧ್ಯಕ್ಕೂ ಅವಿನಾಭಾವ ಸಂಬಂಧಗಳಿವೆ.
ಪುರಾತನ ಕಾಲದಲ್ಲಿ ಜೈನ
ವಂಶಸ್ಥರು, ಹಿಂದುಗಳು ಆರಾಧಿಸಿಕೊಂಡು ಬಂದಿರುವ ಧರ್ಮ ಸಮನ್ವಯ ಶಕ್ತಿ ಕೇಂದ್ರವಾಗಿದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿದೆ.
ಕಾರ್ಯಕ್ರಮಗಳು: ಬೆಳಿಗ್ಗೆ ಗಂ 8 ಕ್ಕೆ ಪುಣ್ಯಾಹ ವಾಚನ,
ಪ್ರಧಾನ ಹೋಮ, ಕಲಶಾಭಿಷೇಕ, ಹೂವಿನ ಅಲಂಕಾರ ಸೇವೆ
ನೀಡಿದ ಬೇಳೂರು ಶ್ರೀ ದುರ್ಗಾ ಪರಮೇಶ್ವರಿ ಕನ್‌ಸ್ಟ್ರಕ್ಷನ್,
ಕೊಂಜಾಡಿ ಹಡಿಗಾರಮನೆ ಉಷಾಕಿರಣ ಪ್ರವೀಣಕುಮಾರ್ ಶೆಟ್ಟಿ ಮತ್ತು ಮಕ್ಕಳಿಂದ ಬೆಳಿಗ್ಗೆ ಗಂ 8.30 ರಿಂದ ಚಂಡಿಕಾಹೋಮ,ಗಂ 10 ಕ್ಕೆ ಹಣ್ಣು ಕಾಯಿ, ಹರಿವಾಣ ನೈವೇದ್ಯ, ಗಂ 11 ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ ಗಂ 12.30 ಕ್ಕೆ ಮಹಾಪೂಜೆ,
ಪ್ರಸಾದ ವಿತರಣೆ, ಗಂ 1 ಕ್ಕೆ ಕೊಂಜಾಡಿ ಸಂಪಿಗೆಮನೆ ಜಲಜಾಕ್ಷಿ ಭೋಜ ಶೆಟ್ಟಿ ಮತ್ತು ಮನೆಯವರಿಂದ ಅನ್ನ ಸಂತರ್ಪಣೆ ಸೇವೆ, ರಾತ್ರಿ ಗಂ 7 ರಿಂದ ಗಂಟುಬೀಳು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಂ 10 ರಿಂದ ಗಂ 4 ರ ತನಕ ಹಾಲಾಡಿ ಮೇಳದವರಿಂದ ಹಂಸ ಪಲ್ಲಕ್ಕಿ ಯಕ್ಷಗಾನ ಬಯಲಾಟ,ರಾತ್ರಿ ಗಂ 12 ರಿಂದ ದರ್ಶನ, ಕೆಂಡೋತ್ಸವ, ಗಂ 2
ಕ್ಕೆ ರಂಗಪೂಜೆ, ಗಂ 4 ಕ್ಕೆ ಢಕ್ಕೆ ಬಲಿ, ಗಂ 5 ಕ್ಕೆ ಸುತ್ತುಬಲಿ,
ಪ್ರಸಾದ ವಿತರಣೆ ನಡೆಯಲಿದೆ.