ಬೆಳಗಾವಿ ಸುವರ್ಣವಿಧಾನಸೌಧ : ಸಹಕಾರಿ ಲೆಕ್ಕ ಪರಿಶೋಧನಾ ಇಲಾಖೆಯಿಂದ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬರುವಂತೆ ಆಮೂಲಾಗ್ರ ಬದಲಾವಣೆ ತರಲು ಚಿಂತನೆ ನಡೆದಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ರಾಜ್ಯದಲ್ಲಿ 1679 ಸಹಕಾರ ಸಂಘಗಳಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಮಾಹಿತಿ ಇದೆ. ಸಹಕಾರಿ ಸಂಘಗಳ ಸ್ಥಿತಿಗತಿಯನ್ನು ಗಮನಿಸಿ ಸರ್ಕಾರವು ಯಾವ ರೀತಿಯ ಸುಧಾರಣಾ ವ್ಯವಸ್ಥೆ ರೂಪಿಸಿದೆ ಎನ್ನುವ ವಿಧಾನ ಪರಿಷತ್ತಿನ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಹಕಾರಿ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚಿಗೆ ಹಿರಿಯ ಸಹಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ ಪಡೆಯಲಾಗಿದೆ. ಸಹಕಾರಿ ಸಂಘಗಳಲ್ಲಿನ ಹಣ ದುರುಪಯೋಗ, ಅವ್ಯವಹಾರಕ್ಕೆ ಕಡಿವಾಣ ಹಾಕಲಾಗುವುದು. ಸಹಕಾರಿಗಳು ಮೆಚ್ಚದ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದು ಸಚಿವರು ತಿಳಿಸಿದರು.
ಸಹಕಾರಿ ಲೆಕ್ಕ ಪರಿಶೋಧನಾ ಇಲಾಖೆಯನ್ನು ಬಲಪಡಿಸಲು ನಾನಾ ಯೋಜನೆಗಳನ್ನು ರೂಪಿಸಲಾಗಿದೆ. 390 ಲೆಕ್ಕ ಪರಿಶೋಧಕರ ನೇಮಕಾತಿಗೆ ಪ್ರಸ್ತಾವನೆಯಿದ್ದು ಪರಿಶೀಲನಾ ಹಂತದಲ್ಲಿದೆ. 20 ಜನ ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ. ಅನುಕಂಪದ ಆಧಾರದ ಮೇಲೆ ವಿವಿಧ 55 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸಹಕಾರಿ ಸಂಘಗಳಲ್ಲಿನ ಅವ್ಯವಹಾರವು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದೆ. ಈಗ ಸಿಎಗಳ ಸಂಖ್ಯೆ ಜಾಸ್ತಿ ಇರುವುದರಿಂದಾಗಿ ಅವ್ಯವಹಾರ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅಪರ ನಿರ್ದೇಶಕ ಹುದ್ದೆಗಳನ್ನು ಮೇಲ್ದರ್ಜೇಗೇರಿಸಿ ಆಡಳಿತದಲ್ಲಿ ಬಿಗಿಕ್ರಮ ಜರುಗಿಸಬೇಕು ಎಂದು ಭಾರತಿ ಶೆಟ್ಟಿ ಅವರು ಸಲಹೆ ಮಾಡಿದರು.