ಕುಮಾರಸ್ವಾಮಿ ಮಾತಿನ ಭರದಲ್ಲಿ “ಗ್ಯಾರಂಟಿಗಳಿಂದಾಗಿ ಗ್ರಾಮೀಣ ಮಹಿಳೆಯರ ದಾರಿ ತಪ್ಪಿಸುತ್ತಿದೆ ಸರಕಾರ” ಎಂದರು. ಅದನ್ನೇ ಹಿಡಿದುಕೊಂಡು ಈಗ ಕಾಂಗ್ರೆಸ್ಸು ಮಹಿಳೆಯರನ್ನು ಅವರ ವಿರುದ್ಧ ಎತ್ತಿಕಟ್ಟಿ ಚುನಾವಣಾ ಲಾಭ ಪಡೆಯಲು ಯತ್ನಿಸುತ್ತಿದೆ. ಅದು ರಾಜಕೀಯದಲ್ಲಿ ಸಹಜ ಕೂಡ. ಯಾವ ಪಕ್ಷವಿದ್ದರೂ ಅದನ್ನೇ ಮಾಡುತ್ತಿತ್ತು.

ಕುಮಾರಸ್ವಾಮಿಗೆ ಹೇಳಬೇಕಾದ್ದನ್ನು ಸರಿಯಾಗಿ ಹೇಳಲು ಬಂದಿಲ್ಲ. ಎಷ್ಟೆಂದರೂ ಅದು ರಾಜಕಾರಣಿಗಳ ನಾಲಿಗೆ. ವಿಚಾರ ಸರಿಯಿದ್ದರೂ ಅದನ್ನು ಸರಿಯಾಗಿ ಹೇಳಲು ಬರುವುದಿಲ್ಲ.

ಆ ವಿಚಾರ ಹಾಗಿರಲಿ. ಸರಕಾರದ ಕೆಲಸ ಏನು? ಮೊದಲನೆಯದು ಅಭಿವೃದ್ಧಿ ಕೆಲಸ ಮಾಡುವುದು. ಎರಡನೆಯದಾಗಿ ಮಹಿಳಾ ಸಬಲೀಕರಣದಂತಹ ಯೋಜನೆ ಹಾಕಿಕೊಳ್ಳುವುದು, ಜನರ ಜೀವನ ಮಟ್ಟ ಏರಿಸುವುದು ಇತ್ಯಾದಿ.

ಈಗ ಸರಕಾರ ಏನು ಮಾಡುತ್ತಿದೆ ಹಾಗಿದ್ದರೆ?
ಗ್ಯಾರಂಟಿಗಳಿಗೆ ಸಾವಿರಾರು ಕೋಟಿ ಹಣ ಒದಗಿಸಬೇಕಾದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ಹಣ ಲಭ್ಯವಿಲ್ಲ. ಅದನ್ನು ಅವರ ಪಕ್ಷದವರೇ ಹಲವರು ಒಪ್ಪಿಕೊಂಡಿದ್ದಾರೆ. ಶಾಸಕರ ಮತಕ್ಷೇತ್ರಕ್ಕೆ ಅಗತ್ಯವಾದ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕುಂಠಿತವಾಗಿದೆ. ಯಾವುದರಿಂದ ರಾಜ್ಯದ ಪ್ರಗತಿ ಆಗುವುದಿಲ್ಲವೋ ಅಂತಹ ಗ್ಯಾರಂಟಿಗಳಿಗೆ ಅರ್ಥ ಏನು?

ಇನ್ನೊಂದೆಡೆ ಸರಕಾರ ರಾಜ್ಯದ ಜನರಿಗೆ ತಿಳಿದೂ ತಿಳಿಯದ ಹಾಗೆ ಸಾಧ್ಯವಾದೆಡೆಯಲ್ಲೆಲ್ಲ ದರಗಳನ್ನು ಏರಿಸುವ ನಯವಂಚನೆಗಿಳಿದಿದೆ. ಜನರ ಅನೇಕ ಸೌಕರ್ಯಗಳು ಕಡಿಮೆ ಆಗಿವೆ. ಜನಸಾಮಾನ್ಯರಿಗೆ ಆ ಖಬರೇ ಇಲ್ಲ. ಗ್ಯಾರಂಟಿಗಳ ಲಾಭ ಯಾರಿಗೆ , ಏನು ಮತ್ತು ಎಷ್ಟು? ಸ್ತ್ರೀ ಸಬಲೀಕರಣ ಮಾಡುತ್ತಿದೆ ಎಂದು ಕೆಲವರಿಗೆ ಭ್ರಮೆ. ಹಾಗೆ ಭಾವಿಸಿಕೊಂಡಿದ್ದಾರೆ. ಇದು ದಾರಿ ತಪ್ಪಿಸುವ ಕೆಲಸ ಅಲ್ಲವೇ?

ನಿಜವಾಗಿಯೂ ಮಹಿಳೆಯರ ಉದ್ಧಾರ ಮಾಡಬೇಕೆಂಬ ಕಳಕಳಿ ಸರಕಾರಕ್ಕಿದ್ದಿದ್ದರೆ ಸ್ತ್ರೀ ಶಕ್ತಿ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಬೇಕಿತ್ತು. ಮಹಿಳೆಯರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಬೆಳೆಸಿ, ಅವರೇ ಆರ್ಥಿಕವಾಗಿ ಸಬಲರೂ ಸ್ವತಂತ್ರರೂ ಆಗುವಂತೆ ಮಾಡಬೇಕಿತ್ತು. ಅದರ ಬದಲು ಒಂದಿಷ್ಟು ಉಚಿತಗಳನ್ನು ಕೊಟ್ಟ ಹಾಗೆ ಮಾಡಿ ಅವರನ್ನು ದುರ್ಬಲಗೊಳಿಸುವುದು ಎಷ್ಟರಮಟ್ಟಿಗೆ ಸರಿ? ದಾರಿ ತಪ್ಪಿಸುವುದು ಅಂದರೆ ಇದೇ ಅಲ್ಲವೆ?
– ಎಲ್. ಎಸ್. ಶಾಸ್ತ್ರಿ
ಪತ್ರಕರ್ತ