ಬೆಳಗಾವಿ: ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಕುರಿತು ದಿನದಿಂದ ದಿನಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಜನರಿಗೆ ಸಂಪೂರ್ಣ ವಿಶ್ವಾಸ ಮೂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೂರೂ ಕ್ಷೇತ್ರಗಳಲ್ಲಿ ಅತ್ಯಧಿಕ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.
ಚುನಾವಣೆ ಕಣದಲ್ಲಿ ವಯಕ್ತಿಕ ಆರೋಪ, ಪ್ರತ್ಯಾರೋಪ ಹೆಚ್ಚುತ್ತಿದೆಯಲ್ಲ ಎನ್ನುವ ಪ್ರಶ್ನಿಗೆ, ನಾವು ವಯಕ್ತಿಕ ಆರೋಪಗಳನ್ನು ಮಾಡುತ್ತಿಲ್ಲ. ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವುದನ್ನು ನಾನು ಹೇಳಿದ್ದೇನೆ. ಹೊರಗಿನವರು, ಒಳಗಿನವರು ಎಂದೆಲ್ಲ ಮಾತನಾಡುತ್ತಿರುವವರು ಬಿಜೆಪಿಯ ಸಾಮಾಜಿಕ ಜಾಲತಾಣದವರು. ಅವರು ಮಾತನಾಡಿದ್ದನ್ನು ನಾನು ಪುನರುಚ್ಛರಿಸಿದ್ದೇನೆ ಅಷ್ಟೆ ಎಂದರು.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ವಿಳಾಸವನ್ನು ಚುನಾವಣೆ ಫಲಿತಾಂಶದ ನಂತರ ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ಬರುತ್ತದೆ ಎನ್ನುವ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಚುನಾವಣೆ ಫಲಿತಾಂಶದ ನಂತರ ಅಲ್ವಾ, ನಾನು ಕೂಡ ಚುನಾವಣೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ಈಗ ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ರಮೇಶ ಜಾರಕಿಹೊಳಿ ಕಾಂಗ್ರೆಸ್ ನಾಯಕರನ್ನು ಸೈಲೆಂಟ್ ಆಗಿ ಬಿಜೆಪಿಗೆ ಸೆಳೆಯುತ್ತಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ನನಗೇನೂ ಹಾಗೆ ಅನಿಸುವುದಿಲ್ಲ, ಅವರ ತಂತ್ರವನ್ನು ಅವರು ಮಾಡುತ್ತಾರೆ. ನಮ್ಮ ತಂತ್ರವನ್ನು ನಾವು ಮಾಡುತ್ತೇವೆ. ಅಂತಿಮವಾಗಿ ಮತರಾರರು ಯಾರಿಗೆ ಆಶಿರ್ವಾದ ಮಾಡುತ್ತಾರೋ ಅವರು ಗೆಲ್ಲುತ್ತಾರೆ ಎಂದರು.
ಪತ್ರಕರ್ತರ ಪ್ರಶ್ನೆಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉತ್ತರಿಸಿ, ಬೆಳಗಾವಿ ಜಿಲ್ಲೆಯ ಜನರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿರುವುದನ್ನು ರಾಜ್ಯದ ಜನರು ನೋಡಿದ್ದಾರೆ. ಆಗ ಯಾರ್ಯಾರು ನಮ್ಮ ವಿರುದ್ಧ ಕೆಲಸ ಮಾಡಿದ್ದರು, ಯಾರ್ಯಾರು ಗುಪ್ತ ಸಭೆ ಮಾಡಿದ್ದಾರೆ, ಯಾರ್ಯಾರು ದೊಡ್ಡ ದೊಡ್ಡ ಸಭೆಗಳನ್ನು ಮಾಡಿದ್ದಾರೆ ಎನ್ನುವುದನ್ನು ಎಲ್ಲರೂ ನೋಡಿದ್ದಾರೆ. ಆಗ ಜನರು ಏನು ಉತ್ತರ ಕೊಟ್ಟಿದ್ದಾರೆ ಎನ್ನುವುದನ್ನೂ ಜನರು ನೋಡಿದ್ದಾರೆ. ಈಗಲೂ ಜನರು ಅದೇ ರೀತಿ, ಅದಕ್ಕಿಂತ ದೊಡ್ಡ ಉತ್ತರವನ್ನು ಕೊಡುತ್ತಾರೆ ಎಂದರು.
ಸಿದ್ದರಾಮಯ್ಯ ಪ್ರಚಾರಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆಗೆ, ಮೊದಲ ಹಂತದ ಚುನಾವಣೆ ಮುಗಿದ ನಂತರ ಸಿದ್ದರಾಮಯ್ಯ 2 ಬಾರಿ ಪ್ರಚಾರಕ್ಕೆ ಬರುತ್ತಾರೆ. ಬೆಳಗಾವಿ, ಚಿಕ್ಕೋಡಿ ಮತ್ತು ಕಿತ್ತೂರಿನಲ್ಲಿ ಪ್ರಚಾರ ಮಾಡುತ್ತಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಮಹಾರಾಷ್ಟ್ರದ ಯಾವ ನಾಯಕರು ಬರುತ್ತಾರೆ ಎನ್ನುವ ಪ್ರಶ್ನೆಗೆ, ಸ್ಟಾರ್ ಪ್ರಚಾರಕರ ಪಟ್ಟಿಯನ್ನು ನಮ್ಮ ಪಕ್ಷದ ಹೈಕಮಾಂಡ್ ನವರು ಮಾಡಿದ್ದಾರೆ. ಅವರವರ ಜನಪ್ರಿಯತೆಯನ್ನು ಆಧರಿಸಿ ಸ್ಟಾರ್ ಪ್ರಚಾರಕರನ್ನು ಆಯಾ ಕ್ಷೇತ್ರಗಳಿಗೆ ಕಳಿಸುತ್ತಾರೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಮಲ್ಲೇಶ ಚೌಗಲೆ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.