ಬೆಳಗಾವಿ: ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಮಾಡಿದ ಸಾಧನೆ, ಜಾರಿಗೆ ತಂದಿರುವ ವಿವಿಧ ಯೋಜನೆ ಮತ್ತು ನಾವು ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಜನರು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮೃಣಾಲ ಹೆಬ್ಬಾಳಕರ್ ಗೆಲುವು ಖಚಿತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಕ್ಷೇತ್ರದ ವಿವಿಧ ತಾಲೂಕುಗಳಲ್ಲಿ ಎರಡು ಸುತ್ತಿನ ಪ್ರಚಾರ ಕೈಗೊಂಡ ಬಳಿಕ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ ತಾಲೂಕುಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಕೆಲವು ತಾಲೂಕುಗಳಲ್ಲಿ ಎರಡು ಸುತ್ತು ಪ್ರಚಾರ ನಡೆಸಲಾಗಿದೆ. ಎಲ್ಲ ಕಡೆ ಕಾರ್ಯಕರ್ತರ ಸಭೆ ಪೂರ್ಣಗೊಂಡಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಮತ್ತು ಅನೇಕ ಕಡೆ ಹೋಬಳಿ ಮಟ್ಟದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಾಗಿದೆ. ಹೋದಲ್ಲೆಲ್ಲ ಜನರಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ಯವಾಗುತ್ತಿದೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.
ಆರತಿ, ಹೂಮಳೆಯ ಸ್ವಾಗತ
ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಥಳೀಯ ಶಾಸಕರು ಮತ್ತು ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಮೊದಲ ಸುತ್ತಿನಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ನಂತರದಲ್ಲಿ ಮುಖಂಡರ ಜೊತೆ ಜಿಲ್ಲಾ ಪಂಚಾಯಿ ಮಟ್ಟದ ಮತ್ತು ಕೆಲವೆಡೆ ಹೋಬಳಿ ಮಟ್ಟದ ಸಾರ್ವಜನಿಕ ಸಭೆಗಳನ್ನು ನಡೆಸಲಾಗಿದೆ. ಇನ್ನು ಕೆಲವೆಡೆ ರೋಡ್ ಶೋ ನಡೆಸಲಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರವರ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ನಾವು ಹೋದಲ್ಲೆಲ್ಲ ಆರತಿ ಬೆಳಗಿ ಸ್ವಾಗತಿಸುತ್ತಿದ್ದಾರೆ. ಊರಲ್ಲೆಲ್ಲ ಮೆರವಣಿಗೆ ಮಾಡಿ ಕಾರ್ಯಕ್ರದ ವೇದಿಕೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಎಲ್ಲಿ ನೋಡಿದರೂ ಹೂವಿನ ಮಳೆಗರೆಯುತ್ತಿದ್ದಾರೆ. ಜನರ ಈ ಪ್ರೀತಿ ನೋಡಿದರೆ ನಮ್ಮ ಅಭ್ಯರ್ಥಿ ಗೆಲುವಿನಲ್ಲಿ ಸಂಶಯವೇ ಇಲ್ಲ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.
ಅಭಿವೃದ್ಧಿ ಮತ್ತು ಗ್ಯಾರಂಟಿಗೆ ಜನರ ಮೆಚ್ಚುಗೆ
ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ಕೊಡುಗೆ, ಮಾಡಿರುವ ಅಭಿವೃದ್ಧಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಕೆಲಸ ಹಾಗೂ ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿ ಕಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಜೈ ಎನ್ನುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಜನರು ತಿಳಿದುಕೊಂಡಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡುವಂತಹ ಸಂಸದ ಬೇಕಾಗಿದ್ದಾರೆ. ನಮಗೆ ಸ್ಥಳೀಯರು ಮತ್ತು ಅಭಿವೃದ್ಧಿಪರರ ಬೇಕಾಗಿದ್ದಾರೆ. ಜಿಲ್ಲೆಯ ಸ್ವಾಭಿಮಾನ ಮತ್ತು ಕ್ಷೇತ್ರದ ಅಭಿವೃದ್ಧಿ ಬೇಕಾಗಿದೆ. ಹಾಗಾಗಿ ನಾವು ಈ ಬಾರಿ ಬೇರೆ ಏನನ್ನೂ ಯೋಚಿಸದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದು ಜನರು ಸ್ವಯಂ ಪ್ರೇರಿತರಾಗಿ ಹೇಳುತ್ತಿದ್ದಾರೆ. ಇದು ನಮ್ಮಲ್ಲಿ ಇನ್ನಷ್ಟು ಉತ್ಸಾಹ ಮತ್ತು ವಿಶ್ವಾಸ ಮೂಡಿಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಪ್ರಚಾರದ ವೇಳೆ ಅಲ್ಲಲ್ಲಿ ವಿವಿಧ ಸಮಾಜದ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭೇಟಿಯಾಗಿ ಚರ್ಚಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಂದ ಬೆಳಗಾವಿಗೆ ಹೇಗೆಲ್ಲ ಅನ್ಯಾಯವಾಗಿದೆ ಎನ್ನುವುದನ್ನು ಜನರೇ ನಮ್ಮ ಗಮನಕ್ಕೆ ತರುತ್ತಿದ್ದಾರೆ. ಅಂತಹ ವ್ಯಕ್ತಿ ಕೈಯಲ್ಲಿ ಕ್ಷೇತ್ರವನ್ನು ಕೊಟ್ಟರೆ ನಮಗೆ ಇನ್ನಷ್ಟು ಹಾನಿಯಾಗುವುದು ಖಂಡಿತ. ಹಾಗಾಗಿ ಈಬಾರಿ ಮೃಣಾಲ ಹೆಬ್ಬಾಳಕರ್ ಅವರನ್ನು ಗೆಲ್ಲಿಸಲೇಬೇಕು. ನಾವೆಲ್ಲ ನಮ್ಮ ಏರಿಯಾಗಳಲ್ಲಿ ಜನರ ಮನವೊಲಿಸುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಬೇರೆ ಬೇರೆ ಪಕ್ಷಗಳ ಮುಖಂಡರು ಸಹ ಭೇಟಿಯಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ನಮಗೆ ಖಂಡಿತ 2 ಲಕ್ಷ ಮತಗಳ ಅಂತರದ ಗೆಲುವು ಸಿಗಲಿದೆ ಎನ್ನುವ ವಿಶ್ವಾಸ ಮೂಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪಡೆ
ಬೆಳಗಾವಿ ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರು, ಬ್ಲಾಕ್ ಅಧ್ಯಕ್ಷರು, ಪ್ರಮುಖರ ನೇತೃತ್ವದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲಲ್ಲಿ ಕಾರ್ನರ್ ಮೀಟಿಂಗ್ ಗಳನ್ನು ನಡೆಸುತ್ತಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ತಾವೇ ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರಣಾಂತರದಿಂದ ರಾಜಕಾರಣದಿಂದ ದೂರ ಉಳಿದಿದ್ದ ಹಿರಿಯರು ಕೂಡ ಈ ಬಾರಿ ಹೊರಗೆ ಬಂದು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ. ತಾವೇ ಮುಂದಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಯಾವ ಪ್ರದೇಶಕ್ಕೆ ತೆರಳಿದರೂ ಕಾಂಗ್ರೆಸ್ ಪರ ವಾತಾವಣ ಕಂಡು ಖುಷಿಯಾಗುತ್ತಿದೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ.
ಏಪ್ರಿಲ್ 15ರಂದು ಮೃಣಾಲ ಹೆಬ್ಬಾಳಕರ್ ನಾಮಪತ್ರ ಸಲ್ಲಿಸಲಿದ್ದಾರೆ. ನಂತರದಲ್ಲಿ ಮತ್ತೊಂದು ಸುತ್ತಿನ ಪ್ರಚಾರ ಕಾರ್ಯ ನಡೆಯಲಿದೆ. ರಾಜ್ಯಮಟ್ಟದ ನಾಯಕರು ಸಹ ಪ್ರಚಾರಕ್ಕೆ ಬರಲಿದ್ದಾರೆ. ಬದಲಾವಣೆಗಾಗಿ, ಬೆಳಗಾವಿಯ ಸಮಗ್ರ ಅಭಿವೃದ್ಧಿಗಾಗಿ, ಯುವಜನರಿಗೆ ಉದ್ಯೋಗ ಸೃಷ್ಟಿಗಾಗಿ, ಕ್ಷೇತ್ರಕ್ಕೆ ಹೆಚ್ಚಿನ ಉದ್ಯಮ, ಉದ್ಯೋಗ ತರುವುದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರನ್ನು ಬೆಂಬಲಿಸಬೇಕು ಎಂದು ನಾನು ಜನರಲ್ಲಿ ಕೈಮುಗಿದು ಕೇಳುತ್ತೇನೆ. ಎಲ್ಲರೂ ಸೇರಿ ಬೆಳಗಾವಿಯನ್ನು ಜನಸ್ನೇಹಿಯಾಗಿ ಅಭಿವೃದ್ಧಿಪಡಿಸೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದ್ದಾರೆ.