ಬೆಳಗಾವಿ:
ವಕೀಲರ ರಕ್ಷಣಾ ಕಾಯ್ದೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೇ ಜಾರಿಗೆ ತರುವಂತೆ ರಾಜ್ಯದ ವಕೀಲರು ಆಗ್ರಹಿಸಿದ್ದಾರೆ.

ಈ ಸಂಬಂಧ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸದಲ್ಲಿ ರಾಜ್ಯ ವಕೀಲರ ಪರಿಷತ್ತಿನ‌ ಅಧ್ಯಕ್ಷರು, ಪದಾಧಿಕಾರಿಗಳು, ಬೆಂಗಳೂರು ನಗರ ಬಾರ್ ಸೇರಿ, ವಿವಿಧ ಜಿಲ್ಲಾ ಬಾರ್ ಅಸೋಸಿಯೇಷನ್ ವತಿಯಿಂದ ಪ್ರಮುಖರು ಸೇರಿ ಸರಕಾರದೊಂದಿಗೆ ಈ ಬಗ್ಗೆ ಚರ್ಚೆ ನಡೆಸುವ ಮಾಹಿತಿ ಹೊರಬಿದ್ದಿದೆ.

ವಕೀಲರ ಮೇಲೆ ಪೊಲೀಸರು, ಸಾರ್ವಜನಿಕರು, ಪಟ್ಟಭದ್ರ ಹಿತಾಸಕ್ತಿಗಳಿಂದ ಹಲ್ಲೆ, ಕೊಲೆ, ಮಾನಹಾನಿ ಹಾಗೂ ಆತಂಕದ ಘಟನಾವಳಿಗಳು ಆಗುತ್ತಿದ್ದು ವಕೀಲರಿಗೆ ರಕ್ಷಣೆ ಬೇಕಿದೆ ಎಂದು ವಕೀಲರು ಎಂದಿನಿಂದ ಆಗ್ರಹಿಸುತ್ತ ಬಂದಿದ್ದಾರೆ.
ಮುಖ್ಯಮಂತ್ರಿ, ಗೃಹ ಹಾಗೂ ಕಾನೂನು ಸಚಿವರೊಂದಿಗಿನ ನಿರೀಕ್ಷಿತ ಭಾನುವಾರದ ಸಭೆ ಫಲಪ್ರದವಾದರೆ ಹೆಚ್ಚಿನ ಚಳವಳಿ ಮಾಡದಿರಲು ವಕೀಲರು ನಿರ್ಧರಿಸಿರುವುದು ಮೂಲಗಳಿಂದ ತಿಳಿದುಬಂದಿದೆ.

ಸೋಮವಾರ, ಮಂಗಳವಾರದ ಒಳಗೆ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾನೂನು ರಚನೆ ಆಗದಿದ್ದರೆ ಬುಧವಾರ ರಾಜ್ಯದ ಎಲ್ಲ ಜಿಲ್ಲೆ- ತಾಲೂಕುಗಳಿಂದ ವಕೀಲರು ‘ಬೆಳಗಾವಿ ಚಲೋ’ ಹೊರಟು ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ಯೋಚಿಸಿರುವುದು ಗಮನ ಸೆಳೆದಿದೆ.
ಚಿಕ್ಕಮಗಳೂರು ಯುವ ವಕೀಲನ ಮೇಲೆ ಪೊಲೀಸ್ ಹಲ್ಲೆ, ಕಲಬುರಗಿಯ ಯುವ ವಕೀಲನ ಬರ್ಬರ ಹತ್ಯೆ, ವಕೀಲರಿಗೆ ಸೆಡ್ಡು ಹೊಡೆದ ಪೊಲೀಸ್ ಪೇದೆಗಳ ಆಟಾಟೋಪದ ದೃಶ್ಯ ಘಟನಾವಳಿಗಳ ನಂತರ ವಕೀಲರ ರಕ್ಷಣಾ ಕಾಯ್ದೆ ರಚನೆಗೆ ವಕೀಲರು ಇನ್ನಿಲ್ಲದ ಪಟ್ಟು ಹಿಡಿದಿರುವುದು ಸರಕಾರವನ್ನು ಈ ಅಧಿವೇಶನ ಇಕ್ಕಟ್ಟಿಗೆ ಸಿಲುಕಿಸಿದೆ ಎನ್ನಬಹುದು.