ಬೆಳಗಾವಿ :
ಬಿಜೆಪಿಯವರು ತಮ್ಮ ಮೇಲೆ ಬರುವ ಆರೋಪವನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಾರೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಅಭಿಜಿತ್ ಜವಳ್ಕರ್ ಹಾಗೂ ರಮೇಶ ಪಾಟೀಲ ಅವರ ನಡುವೆ ನಡೆದಿರುವ ಹೊಡೆದಾಟ, ಬಡಿದಾಟ ಪ್ರಕರಣ ಅವರವರ ವೈಯಕ್ತಿಕ. ಆದರೆ, ಅದಕ್ಕೂ ಕಾಂಗ್ರೆಸ್ಸಿಗೆ ಯಾವುದೇ ಸಂಬಂಧವಿಲ್ಲ.
ಅವರಿಬ್ಬರಿಗೂ ಹೊಡೆದಾಟ ಮಾಡಲು ನಾವು ಹೇಳಿದ್ದೇವಾ ? ಎರಡು ಕಡೆಯವರು ಹೊಡೆದಾಟ ನಡೆಸಿದ್ದರು.
ಮಹಾನಗರ ಪಾಲಿಕೆ ಸೂಪರ್ ಸೀಡ್ ಗೂ ಈ ಘಟನೆಗೂ ಏನು ಸಂಬಂಧ ಎಂದು ಅವರು ಬಿಜೆಪಿ ನಾಯಕರು ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿದರು.

ಪೊಲೀಸರು ನೀಡುವ ವರದಿ ಮೇರೆಗೆ ನ್ಯಾಯಾಲಯ ಅಂತಿಮವಾಗಿ ಕ್ರಮ ಕೈಗೊಳ್ಳಲಿದೆ. ಈ ಪ್ರಕರಣವನ್ನು ಇಡೀ ಬೆಳಗಾವಿಗೆ ಹಬ್ಬಿಸುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

 

 

ಗೋವಾವೆಸ್ ತಿನಿಸು ಕಟ್ಟೆ ಅಂಗಡಿಗಳ ಟೆಂಡರನ್ನು ರಾಜ್ಯಮಟ್ಟದ ಎರಡು ಪತ್ರಿಕೆಗಳಲ್ಲಿ ನೀಡಬೇಕಾಗಿತ್ತು. ಆದರೆ, ಗಾಳಿ ಗೋಪುರ ಎಂಬ ಪ್ರಚಾರವಿಲ್ಲದ ಪತ್ರಿಕೆಯಲ್ಲಿ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರಾಗಿರುವ 54 ಜನರಿಗೆ ಅಂಗಡಿಗಳನ್ನು ಕೇವಲ
₹ 4,000 ಗಳಿಗೆ ತಿಂಗಳ ಬಾಡಿಗೆಗೆ ನೀಡಿದ್ದಾರೆ. ಕನಿಷ್ಠಪಕ್ಷ ಅದು ₹ 20,000 ಬಾಡಿಗೆಗೆ ಹೋಗುತ್ತದೆ. ಆರ್ಥಿಕವಾಗಿ ದುರ್ಬಲರಿಗೆ ನೀಡಬೇಕು ಎಂಬ ನಿಯಮವಿದ್ದರೂ ಅವುಗಳನ್ನು ಗಾಳಿಗೆ ತೂರಿ ಒಂದು ಕೋಟಿ ರೂಪಾಯಿ ವಾಹನ ಹಾಗೂ ಬಂಗಾರದ ಅಂಗಡಿ ಹೊಂದಿರುವವರಿಗೆ ನೀಡಲಾಗಿದೆ. ಅದನ್ನು ಸಹಾ 30 ವರ್ಷಗಳವರೆಗೆ ನೀಡಲಾಗಿದೆ. ಅಂಗಡಿಗಳ ಟೆಂಡರ್ ಸರಿಯಾಗಿ ಆಗಿಲ್ಲ. ಅದನ್ನು ಮತ್ತೊಮ್ಮೆ ಟೆಂಡರ್ ಕರೆಯಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.

 

ಲೋಕಸಭಾ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು ಅಂತಿಮವಾಗಿ ಮೂವರು ಆಕಾಂಕ್ಷಿಗಳ ಹೆಸರನ್ನು ಪಕ್ಷಕ್ಕೆ ನೀಡಲಾಗುತ್ತದೆ. ಅಧಿವೇಶನ ಸಂದರ್ಭದಲ್ಲಿ ಆ ಬಗ್ಗೆ ಹೆಸರುಗಳನ್ನು ನೀಡುತ್ತೇವೆ. ವಿಧಾನಸಭಾ ಚುನಾವಣೆಗೆ ಎರಡು ಲಕ್ಷ ರೂಪಾಯಿ ಅಭ್ಯರ್ಥಿಗಳಿಂದ ಪಡೆಯಲಾಗಿತ್ತು. ಆದರೆ, ಈಗ ಗ್ಯಾರಂಟಿ ಬಂದ ನಂತರ ಲೋಕಸಭಾ ಟಿಕೆಟ್ ಸಹಾ ಫ್ರಿ ಎಂದು ನಗುತ್ತಾ ಉತ್ತರ ನೀಡಿದರು.