ಬೆಂಗಳೂರು :
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 6 ತಿಂಗಳಾಗಿದೆ. ವಿಪಕ್ಷಗಳ ನಾಯಕರು ಸರ್ಕಾರವನ್ನು ಪತನವಾಗಲಿದೆ ಎಂದು ಹೇಳುತ್ತಾ ಬಂದಿದ್ದರು. ಆದರೆ, ಈಗ ಸರ್ಕಾರದ ಸ್ವಪಕ್ಷೀಯ ಶಾಸಕ ಬಿ.ಆರ್. ಪಾಟೀಲ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಸ್ತಾಪ ಮಾಡಿದ್ದಾರೆ.

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ವತಿಯಿಂದ ನಡೆಸಲಾದ ಕಾಮಗಾರಿ ಕುರಿತಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕಾ ಖರ್ಗೆ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪತ್ರವನ್ನು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿಗೆ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

 

ಕಳೆದ ವಿಧಾನಸಭೆಯ ವಿಷಯ ಪ್ರಸ್ತಾಪಿಸಿ ಶಾಸಕ ಬಿ.ಆರ್. ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. 2013ರಲ್ಲಿ ಕಾಮಗಾರಿಗಳನ್ನು ನಾನು ಕೆಆರ್‌ಐಡಿಎಲ್ ಗೆ ನೀಡಿದ್ದೆನು. ಆದರೆ ಕಾರಣಾಂತರಗಳಿಂದ 2013ರಲ್ಲಿ ನೀಡಿದ್ದ ಕಾಮಗಾರಿಗಳು ಪೂರ್ಣವಾಗಿಲ್ಲ. ಈ ಬಗ್ಗೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದಾಗ ನನ್ನನ್ನೇ ಅನುಮಾನದಿಂದ ನೋಡಲಾಯಿತು. ಸಚಿವ ಪ್ರಿಯಾಂಕ ಖರ್ಗೆ ಅನುಪಸ್ಥಿತಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಮಾತನಾಡಿದರು. ಕೆಆರ್‌ಐಡಿಎಲ್ ಕಡೆಯಿಂದ ನಾನು ಹಣಪಡೆದು ಭೂಸೇನೆಗೆ ಕಾಮಗಾರಿ ಕೊಟ್ಟಿದ್ದೇನೆ ಎಂದು ಅನುಮಾನ ಬರುವಂತೆ ಮಾತನಾಡಿದ್ದರು. ಅದಾದ ಮೇಲೂ ಸಚಿವ ಪ್ರಿಯಾಂಕ ಖರ್ಗೆ ಕಾಮಗಾರಿಗಳ ಕುರಿತು ಸಭೆಯನ್ನು ನಡೆಸಲಿಲ್ಲ. ಇಂಥ ಆರೋಪಗಳನ್ನು ಹೊತ್ತುಕೊಂಡು ನಾನು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ನಾನು ಆರೋಪ ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ ನನ್ನ ಮೇಲೆ ಬಂದ ಆರೋಪ ಗಳಿಗೆ‌ ತನಿಖೆಯನ್ನು ನಡೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬತ್ರ ಬರೆದಿದ್ದಾರೆ.

ಸರ್ಕಾರ ಅಧಿಕಾರಕ್ಕೆ 6 ತಿಂಗಳಲ್ಲಿ ಸರ್ಕಾರಕ್ಕೆ 2ನೇ ಬಾರಿಗೆ ಮುಜುಗರ: ಕಾಂಗ್ರೆಸ್‌ ಒಟ್ಟು 135 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಬಹುಮತದ ಸರ್ಕಾರ ರಚನೆ ಮಾಡಿದ ನಂತರವೂ ಸರ್ಕಾರವನ್ನು ವಿಪಕ್ಷಗಳು ಬೀಳಿಸುತ್ತವೆ ಎನ್ನುವ ನಿಟ್ಟಿನಲ್ಲಿ ಯಾರ ಆಮಿಷಕ್ಕೂ ಒಳಗಾಗಿಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲ ಶಾಸಕರಿಗೆ ಶಾಸಕಾಂಗ ಸಭೆಯಲ್ಲಿಯೇ ಎಚ್ಚರಿಕೆ ನೀಡಿದ್ದರು. ಇದಾದ ನಂತರ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಹೇಳಿಕೆ ನಿಡಿದ್ದರು. ಆದರೆ, ಈಗ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಲ್ಲಿ ಎರಡನೇ ಬಾರಿಗೆ ಸ್ವಪಕ್ಷೀಯ ಶಾಸಕರಿಂದ ಸರ್ಕಾರಕ್ಕೆ ಮುಜುಗರ ಉಂಟಾಗುವಂತೆ ಪತ್ರವನ್ನು ಬರೆಯಲಾಗಿದೆ. ಇದನ್ನು ನೋಡಿದ ಬಿಜೆಪಿಗರು ಸರ್ಕಾರದ ಪತನ ಇಲ್ಲಿಂದಲೇ ಪ್ರಾರಂಭ. ಸರ್ಕಾರ ಬಿದ್ದರೂ ಅದು ಬಿಜೆಪಿಯಿಂದಾಗಿ ಅಲ್ಲ, ಸ್ವಪಕ್ಷೀಯ ಕಾಂಗ್ರೆಸಿಗರಿಂದಲೇ ಎಂಬುದಕ್ಕೆ ನಾಂದಿ ಹಾಡಿದಂತಿದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.