ಬೆಂಗಳೂರು:
ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್. ನಾಗರಾಜ್, ಲೋಕೋಪಯೋಗಿ ಇಲಾಖೆಯ ಕಟ್ಟಡಗಳ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ಎನ್. ಸತೀಶ್ ಬಾಬು ಸೇರಿದಂತೆ ಐವರು ಅಧಿಕಾರಿಗಳು ಹಾಗೂ ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್.‌ ಸುರೇಶ್ ಮನೆಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ಮಾಡಿರುವ‌ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕುಂದಾಣ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಿ.ಎಂ. ಪದ್ಮನಾಭ, ಕರ್ನಾಟಕ ಗ್ರಾಮೀಣ‌ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ‌ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್, ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಮಂಜೇಶ್ ಬಿ. ದಾಳಿಗೊಳಗಾದ ಇತರರು.

ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಆರು ಮಂದಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ‌ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರು, ರಾಮನಗರ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳ 30 ಸ್ಥಳಗಳ ಮೇಲೆ‌ ಏಕಕಾಲಕ್ಕೆ ದಾಳಿ‌ಮಾಡಿದ್ದು, ಶೋಧ‌ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಮನೆಗಳು, ಕಚೇರಿಗಳು, ಸಂಬಂಧಿಕರು ಮತ್ತು ಬೇನಾಮಿ ವ್ಯಕ್ತಿಗಳ ಮನೆಗಳಲ್ಲಿ ಶೋಧ ನಡೆಸಲಾಗುತ್ತಿದೆ.