ಮಡಾಮಕ್ಕಿ ಹೆಸರು ಕರಾವಳಿಯಲ್ಲಿ ಅತ್ಯಂತ ಜನಪ್ರಿಯ. ಶ್ರೀ ವೀರಭದ್ರ ಸ್ವಾಮಿಯ ಹೆಸರಿನಲ್ಲಿ ಕಳೆದ ಮೂರು ದಶಕಗಳಿಂದ ಯಕ್ಷಗಾನ ಕಂಪು ಇರುವ ಜಿಲ್ಲೆಗಳಲ್ಲಿ ಮಡಾಮಕ್ಕಿ ಮೇಳ ಅತ್ಯಂತ ಜನಪ್ರಿಯವಾಗಿ ಯಕ್ಷಗಾನ ಪ್ರದರ್ಶನ ನೀಡುತ್ತಿದೆ. ಶ್ರೀ ವೀರಭದ್ರ ಸ್ವಾಮಿಯ ಕೃಪೆಯಿಂದ ಯಕ್ಷಗಾನ ಮೇಳ ಶ್ರೇಷ್ಠ ಕಲಾಕಾಣಿಕೆಯನ್ನು ನೀಡುತ್ತಿದೆ.

 

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ನಿಸರ್ಗದ ರಮ್ಯ ಮನೋಹರ ತಾಣದಲ್ಲಿ, ಸೀತಾನದಿಯ ತಟದಲ್ಲಿ, ವಿರಾಜಮಾನನಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಮಡಾಮಕ್ಕಿ ಶ್ರೀ ವೀರಭದ್ರಸ್ವಾಮಿಯ ಜಾತ್ರಾ ಮಹೋತ್ಸವ ದಿನಾಂಕ 9/02/2024 ರ ಶುಕ್ರವಾರದ ದಿನದಂದು ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಕೆಲವು ವಿಶೇಷತೆ ಹಾಗೂ ಕಾರಣಿಕ ಬಗ್ಗೆ ಸ್ವಲ್ಪ ತಿಳಿಯೋಣ.

ಇಲ್ಲಿಯ ಮೂಲ ಬಿಂಬ ಹಾಸುಕಲ್ಲು. ಅದರಲ್ಲಿ ಅರ್ಧಚಂದ್ರ ಚಿಹ್ನೆ ಇದೆ. ಅರಿಕಲ್ಲು ಅಣೆ ಎಂಬಲ್ಲಿ ದೈತ್ಯಪೀಡೆಯಿಂದ ಕೋಪೋದ್ರಿಕ್ತನಾದ ವೀರಭದ್ರ ಪರ್ವತಕ್ಕೆ ತಲೆಯನ್ನು ಬಡಿದಾಗ ಒಂದು ಕಲ್ಲು ನದಿಯ ನೀರಲ್ಲಿ ಬಿತ್ತು. ಆ ಶಿಲೆಯಲ್ಲಿ ವೀರಭದ್ರನ ಅರ್ಧಚಂದ್ರಚಿಹ್ನೆ ಮೂಡಿತು. ಆ ಶಿಲೆಯನ್ನೇ ಪ್ರತಿಷ್ಠಾಪಿಸಲಾಯಿತು.
ಇಲ್ಲಿಯ ದೇವಾಲಯ ಒಂದು ಕಲ್ಲಿನ ಕಟ್ಟೆ ಮತ್ತು ಅದರ ಮೇಲೆ ಒಂದು ಮಣ್ಣಿನ ಕಟ್ಟೆ. ಅದರ ಮೇಲೆ ಹಾಸುಶಿಲೆ. ಮಳೆನೀರು ಈ ಮೂಲಶಿಲೆಗೆ ಬೀಳುತ್ತದೆ.

ಈ ಕ್ಷೇತ್ರಕ್ಕೆ ಸಮೀಪದಲ್ಲಿ ಋಷಿಕೋಣ ಎಂಬ ಸ್ಥಳ ಇದೆ. ಇದರ ಮೂಲ ಹೆಸರು ಋಷಕೋಣ ಅಥವಾ ವೃಷಕೋಣ. ಇಲ್ಲಿ ಶಿವಕವಚದ ಋಷಿಯಾದ ಋಷಭಯೋಗೀಶ್ವರನ ಆವಾಸ ಇತ್ತು. ಪುರಾಣದಲ್ಲಿ ಬರುವ ಶಿವಕವಚವು ಮಡಾಮಕ್ಕಿವೀರಭದ್ರನ ಸ್ತುತಿಯಾಗಿದೆ. ಹೀಗೆ ಈ ಕ್ಷೇತ್ರಕ್ಕೆ ಒಂದು ರೀತಿಯ ಪುರಾಣ ಪ್ರಸಿದ್ಧಿಯೂ ಇದೆ.
ಇಲ್ಲಿ ಕೋಟೆರಾಯ ಎಂಬ ವಿಶೇಷವಾದ ಪರಿವಾರ ಇದೆ. ಒಟ್ಟು ಐದಾರು ಕಡೆಗಳಲ್ಲಿ ಮಾತ್ರ ಕೋಟೆರಾಯ ಇದೆ. ಎಲ್ಲಾ ಕಡೆಗಳಲ್ಲಿ ಇರುವ ಕೋಟೆರಾಯಗಳು ಮಡಾಮಕ್ಕಿವೀರಭದ್ರನ ಪರಿವಾರಗಳು.
ಬನಶಂಕರಿ ಇಲ್ಲಿನ ಬಲಿಷ್ಠ ಶಕ್ತಿದೇವತೆ. ಇದು ಈ ಕ್ಷೇತ್ರದಲ್ಲಿ ಮೂಲದಲ್ಲಿ ಇದ್ದ ಅಮತ್ರಪುರ ಎಂಬ ರಾಜಮನೆತನದ ದೇವರು. ಆ ಕಾಲದಲ್ಲಿ ಇದಕ್ಕೆ ಭಗವತಿ ಎಂಬ ಹೆಸರಿತ್ತು.
ಇಲ್ಲಿನ ಹುಲಿದೇವರು ಉತ್ಸವಕ್ಕೆ ಮುರುದಿನ ಮುಂಚೆ ಊರಿನಲ್ಲಿ ಆರ್ಭಟಿಸಿ ಹೇಳಿಕೆ ಕೊಡುತ್ತದೆಂಬ ವಾಡಿಕೆ ಇದೆ.
ಇಲ್ಲಿನ ಮೂಲಬಿಂಬಕ್ಕೆ ಅಷ್ಟಬಂಧ ಇಲ್ಲ. ಮೃತ್ತಿಕಾಬಂಧ ಇದೆ. ಇದನ್ನೇ ಪ್ರಸಾದವಾಗಿ ಕೊಡುತ್ತಾರೆ. ಈ ಪ್ರಸಾದ ಸರ್ವಾರ್ಥಸಾಧಕವಾಗಿದೆ.

ಇಲ್ಲಿನ ಯಕ್ಷಗಾನ ಮೇಳ ತುಂಬಾ ಪ್ರಸಿದ್ಧವಾಗಿದೆ. ಸುಮಾರು ಮೂರು ದಶಕಗಳಿಂದ ಕಲಾಸೇವೆಗೈಯುತ್ತಿರುವ ಮಡಾಮಕ್ಕಿ ಮೇಳವು ಕರಾವಳಿ -ಮಲೆನಾಡನ್ನು ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತಿದೆ.”ಮಡಾಮಕ್ಕಿ ಕ್ಷೇತ್ರ ಮಹಾತ್ಮೆ” ಪ್ರಸಿದ್ದವಾದ ಯಕ್ಷಗಾನ ಪ್ರಸಂಗ
ಇಲ್ಲಿನ ಮೂಲಶಿಲೆಯನ್ನು ಸಮತಟ್ಟಾಗಿ ಪ್ರತಿಷ್ಠಾಪಿಸಿಲ್ಲ. ಮುಂಭಾಗ ಇಳಿಜಾರಾಗಿದೆ. ವೀರಭದ್ರನು ಮೊಣಕಾಲುಗಂಟುಗಳನ್ನು ಊರಿ ನೆಲೆಯಾದ್ದರಿಂದ ಈ ರೀತಿ ಪ್ರತಿಷ್ಠೆ ನಡೆದಿದೆ.

ಕೆಂಡೋತ್ಸವದ ರಾತ್ರಿಪೂಜೆ ಕಾಲದಲ್ಲಿ ಒಂಭತ್ತುಕೋಟಿಮದ್ದಾನೆಗಳ ಶಕ್ತಿ ಮಣ್ಣಿನ ಕಟ್ಟೆಯಲ್ಲಿ ಮತ್ತು ಮೂಲಬಿಂಬದಲ್ಲಿ ಪ್ರಕಟವಾಗುತ್ತದೆ. ಆ ಪೂಜೆಯನ್ನು ನೋಡಿದರೆ ಮಹಾಪಾತಕಗಳೂ ಪರಿಹಾರವಾಗುತ್ತವೆ.
ಹಿಂದೆ ಅನೇಕ ನಿಗ್ರಹಾನುಗ್ರಹಶಕ್ತಿ ಪ್ರಕಟವಾದ ಘಟನೆಗಳು ನಡೆದಿವೆ.

ಕಟ್ಟೆಯ ಕೆಳಭಾಗದಲ್ಲಿ ಮೊಸಳೆ ( ನಿಗಳ ) ಆಕಾರದ ಅಗ್ನಿಜ್ವಾಲೆ ಭೂಮಿಯೊಳಗೆ ಇದೆ. ಅದರಲ್ಲಿ ವೀರಭದ್ರನ ಸನ್ನಿಧಾನ ಇದೆ. ಆ ಸಾನ್ನಿಧ್ಯ ದೇವತೆಗಳಿಂದ ಉಪಾಸ್ಯವಾಗಿದೆ.

ಮಡಾಮಕ್ಕಿವೀರಭದ್ರನು ಅಪೂರ್ವದ ಅಗ್ನಿವೀರಭದ್ರ. ಹಾಗಾಗಿ ಕೆಂಡಸೇವೆಯ ರಾತ್ರಿಪೂಜೆಯಲ್ಲಿ ದೇವರ ಎದುರು ವಿಶೇಷ ಪ್ರಮಾಣದಲ್ಲಿ ಕರ್ಪೂರವನ್ನು ಉರಿಸುತ್ತಾರೆ. ಇದು ಸ್ವಾಮಿಗೆ ನೈವೇದ್ಯಸ್ಥಾನದಲ್ಲಿ ಇದೆ.

ಹೀಗೆ ವಾಡಿಕೆಯಲ್ಲಿ ಬಂದಂತೆ ಅನೇಕ ಅಪೂರ್ವವಾದ ವಿಚಾರಗಳು ಮಡಾಮಕ್ಕಿಯಲ್ಲಿ ಇವೆ. ಇಂತಹ ಕ್ಷೇತ್ರದಲ್ಲಿ ನಡೆಯುವ ಉತ್ಸವಕ್ಕೆ ಬಂದು ಮೃತ್ತಿಕಾಪ್ರಸಾದ ಸ್ವೀಕರಿಸಿ ಶ್ರೀ ದೇವರಕೃಪೆಗೆ ಪಾತ್ರರಾಗಿ. ಮಾನವ ಜನುಮವನ್ನು ಪುನೀತರಾಗಿಸಿಕೊಳ್ಳಿ.

✒️ ನವೀನ್ ಶೆಟ್ಟಿ, ಮಡಾಮಕ್ಕಿ